ಬೆಳಗಾವಿ: ‘ಪ್ರವಾಹ ಪರಿಸ್ಥಿತಿ, ಮಳೆಹಾನಿ ಸಂದರ್ಭದಲ್ಲಿ ಪರಿಹಾರ ವಿತರಿಸಿ ಬರುವುದಷ್ಟೇ ಅಧಿಕಾರಿಗಳ ಕೆಲಸವಲ್ಲ. ಅನಾಹುತಗಳನ್ನು ತಪ್ಪಿಸುವಂತೆ ಕೆಲಸ ಮಾಡುವುದು ಮುಖ್ಯ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದರು.
ಸುವರ್ಣ ವಿಧಾನ ಸೌಧದಲ್ಲಿ ಸೋಮವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರವಾಹ ಉಂಟಾದರೆ ಜನ– ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ವಹಿಸಬೇಕು. ಹಾನಿ ತಡೆಗಟ್ಟಲು ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಪಿಡಿಒ ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ಪ್ರವಾಹ ನಿರ್ವಹಣೆಗೆ ಶ್ರಮಿಸಬೇಕು’ ಎಂದರು.
‘ಪ್ರವಾಹ ನಿರ್ವಹಿಸಲು ಗ್ರಾಮ ಪಂಚಾಯಿತಿಗಳಲ್ಲಿ ರಚಿಸಲಾದ ಟಾಸ್ಕಪೋರ್ಸ್‌ಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ಸಂಭವನೀಯ ಹಾನಿ ತಡೆಗಟ್ಟಬಹುದು. ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಈಗಿನಿಂದಲೇ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ಸಹಿಸುವುದಿಲ್ಲ’ ಎಂದೂ ಹೇಳಿದರು.
‘ಜಿಲ್ಲೆಯಲ್ಲಿ ಪೋಡಿಮುಕ್ತ ಗ್ರಾಮ ಅಭಿಯಾನವನ್ನು ಹಮ್ಮಿಕೊಳ್ಳಬೇಕು. ತಹಶೀಲ್ದಾರ, ಉಪವಿಭಾಗಾಧಿಕಾರಿಗಳ ಹಂತದಲ್ಲಿನ ಕೋರ್ಟ್ ಕೇಸುಗಳನ್ನು ತ್ವರಿತವಾಗಿ ವಿಲೇ ಮಾಡಬೇಕು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು ಸ್ಥಳಾವಕಾಶ ಒದಗಿಸಲಾಗಿದೆ’ ಎಂದರು.
‘ಕಂದಾಯ ಗ್ರಾಮದಡಿ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ವಯ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ವಿತರಣೆಗೆ ತ್ವರಿತ ಕ್ರಮ ಜರುಗಿಸಬೇಕು. ಈ ಕುರಿತು ತಹಶೀಲ್ದಾರರು ಕ್ಷೇತ್ರ ಭೇಟಿ ಮಾಡಿ ಬಿಟ್ಟು ಹೋದಂತಹ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಕ್ರಮ ವಹಿಸಬೇಕು’ ಎಂದೂ ತಿಳಿಸಿದರು.
‘ಆಸ್ತಿಗಳ ಭದ್ರತೆಗೆ ಆಧಾರ ಸಂಖ್ಯೆ ಜೊಡಣೆಯಾಗಿದ್ದು, ಇದನ್ನು ಇನ್ನೂ ಭದ್ರಪಡಿಸಲು ಇ–ಕೆವೈಸಿ ಮಾಡಲಾಗುತ್ತಿದೆ. ಇದರಿಂದಾಗಿ ಒಬ್ಬರ ಆಸ್ತಿ ಇನ್ನೊಬ್ಬರ ಪಾಲಾಗದಂತೆ ಮಾಡಬಹುದು’ ಎಂದೂ ಸಚಿವ ತಿಳಿಸಿದರು.
‘ಅನುಮತಿ ಇಲ್ಲದೇ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದ್ದು, ಈ ಕುರಿತು ಪರಿಶೀಲಿಸಬೇಕು. ಕೃಷಿಯೇತರ ಚಟುವಟಿಕೆಗಳಿಗಾಗಿ ಬಳಸಲಾಗುವ ಭೂಮಿಯನ್ನು ಪಹಣಿಯಲ್ಲಿ ದಾಖಲಿಸುವುದರಿಂದ ಭೂಮಿ ಮಾರಾಟದಲ್ಲಿ ಆಗುವಂತಹ ಮೋಸವನ್ನು ತಡೆಯಬಹುದು’ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ‘ಮಳೆಯಿಂದಾಗಿ ಅಪಾಯ ಮಟ್ಟ ಮೀರಿ ಹರಿಯುವಂತಹ ನದಿ, ಹಳ್ಳ, ಸೇತುವೆಗಳ ಹತ್ತಿರ ಜನ–ಜಾನುವಾರುಗಳ ಸಂಚಾರ ನಿರ್ಬಂಧಿಸಿ ಪ್ರದರ್ಶನ ಫಲಕಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ, ಐ.ಎ.ಎಸ್. ಅಧಿಕಾರಿ ಅಭಿನವ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
‘ಭೂ ಸುರಕ್ಷಾ ಯೋಜನೆಯಡಿ ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಕಾರ್ಯವನ್ನು ಇನ್ನಷ್ಟು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಕಾರ್ಯದಲ್ಲಿ ಉದಾಸಿನ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ ಕೃಷ್ಣ ಬೈರೇಗೌಡ, ಭೂ ಸುರಕ್ಷ ಯೋಜನೆಯಡಿ ಪ್ರಗತಿ ಸಾಧಿಸದೆ ಇರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಕಂದಾಯ ಇಲಾಖೆಯ ಎಲ್ಲ ಕಚೇರಿಗಳು ಇ–ಆಫೀಸನಡಿ ಕಾರ್ಯ ನಿರ್ವಹಿಸಬೇಕು. ಅದೇ ರೀತಿ ನಾಡ ಕಚೇರಿಗಳೂ ಇ– ಆಫೀಸನಲ್ಲಿಯೇ ಕಡತಗಳನ್ನು ಮಂಡಿಸಬೇಕು. ಈ ಕುರಿತು ಸಿಬ್ಬಂದಿಗೆ ಇ–ಆಫೀಸ್ ಬಳಕೆ ಕುರಿತು ತರಬೇತಿ ನೀಡಿ’ ಎಂದರು.
‘ಶಿಥಿಲಾವಸ್ಥೆ ತಲುಪಿದ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ತರಗತಿಗಳನ್ನು ನಡೆಸದಂತೆ ನಿಗಾವಹಿಸಬೇಕು. ಶಿಥಿಲ ಮನೆಗಳನ್ನು ಗುರುತಿಸಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಗೊಳಿಸಬೇಕು’ ಎಂದು ಸಚಿವ ಸೂಚಿಸಿದರು.
‘ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ಪರಿಹಾರವನ್ನು ಮಾರ್ಗಸೂಚಿಗಳನ್ವಯ ವಿತರಿಸಬೇಕು. ಅತೀವೃಷ್ಠಿ ಸಂದರ್ಭದಲ್ಲಿ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯದ ಬೋಟ್‌ಗಳ ವ್ಯವಸ್ಥೆ ಮಾಡಿಕೊಳ್ಳುವದರ ಜೊತೆಗೆ ಅವುಗಳ ನಿರ್ವಹಣೆಯನ್ನು ಮಾಡಬೇಕು’ ಎಂದೂ ಹೇಳಿದರು.
‘ಜಿಲ್ಲೆಯಲ್ಲಿ ರಚನೆಯಾಗಿರುವ ಹೊಸ ತಾಲ್ಲೂಕುಗಳಿಗೆ ಪ್ರಜಾಸೌಧ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ನಾಡಕಚೇರಿಗಳ ದುರಸ್ತಿ ಕ್ರಮ ವಹಿಸಲಾಗುವುದು: ಎಂದು ಕಂದಾಯ ಸಚಿವ ತಿಳಿಸಿದರು.
‘ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಸಾರ್ವಜನಿಕರಿಗೆ ಅನುಕೂಲಾವಗುವಂತೆ ಕಾರ್ಯ ನಿರ್ವಹಿಸಬೇಕು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.