ADVERTISEMENT

ಬೆಳಗಾವಿಗೆ ನಾಳೆ ರಾಷ್ಟ್ರಪತಿ ಭೇಟಿ: KLE ಕ್ಯಾನ್ಸರ್‌ ಆಸ್ಪತ್ರೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 14:12 IST
Last Updated 2 ಜನವರಿ 2025, 14:12 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜ.3ರಂದು ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್‌ ಆಸ್ಪತ್ರೆಯನ್ನು ರಾಷ್ಟ್ರ‍ಪತಿ ಅವರು ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಜನಸೇವೆಗೆ ಅರ್ಪಿಸುವರು. ಬಳಿಕ ಪಕ್ಕದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಅವರು, ಅಲ್ಲಿಂದ ರಸ್ತೆ ಮೂಲಕವಾಗಿ ವೇದಿಕೆ ತಲುಪಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತಾಲಯದಿಂದ ಸುರಕ್ಷತೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಶೇಷ ದಳಗಳ ಮೂಲಕ ಮುಂಜಾಗೃತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ADVERTISEMENT

ಕಾರ್ಯಕ್ರಮಕ್ಕೆ ಬರುವವರು ನೀರಿನ ಬಾಟಲಿ, ಕೈಚೀಲ, ಛತ್ರಿ, ಮೊಬೈಲ್ ಮತ್ತಿತರ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಆಮಂತ್ರಿತರು ಮಧ್ಯಾಹ್ನ 3ರೊಳಗೆ ಆಗಮಿಸಬೇಕು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಅತ್ಯಾಧುನಿಕ ಆಸ್ಪತ್ರೆ: ‘ಸುಮಾರು ₹300 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳನ್ನು ಹೊಂದಿದ, 1.75 ಲಕ್ಷ ಚದರ ಅಡಿ ವಿಸ್ತೀರ್ಣದ ಬೃಹತ್‌ ಆಸ್ಪತ್ರೆಯನ್ನು ಅತಿ ಕಡಿಮೆ ದರದಲ್ಲಿ ಕ್ಯಾನ್ಸರ್‌ಗೆ ವಿಶ್ವಮಟ್ಟದ ಚಿಕಿತ್ಸೆ ನೀಡಲಾಗುತ್ತದೆ’ ಎಂದು ರೂವಾರಿಗಳಾದ ಪ್ರಭಾಕರ ಕೋರೆ ತಿಳಿಸಿದ್ದಾರೆ.

‘ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್‌ ರೋಗಕ್ಕೆ ಸೂಕ್ತ ಆಸ್ಪತ್ರೆ ಇರಲಿಲ್ಲ. ಬಹಳಷ್ಟು ವರ್ಷಗಳಿಂದ ರೋಗಿಗಳು ಮುಂಬೈ ಇಲ್ಲವೇ ಬೆಂಗಳೂರಿಗೆ ಹೋಗಬೇಕಾಗಿತ್ತು. ಈ ಕೊರತೆ ನೀಗಿಸಲು ಪ್ರತ್ಯೇಕ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಿದ್ದೇವೆ. ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ರಾಜ್ಯಗಳ ರೋಗಿಗಳಿಗೂ ಇದು ಅನುಕೂಲ ಆಗಲಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಈ ಆಸ್ಪತ್ರೆ ನಿರ್ಮಿಸಲು ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿ, ಅಮೆರಿಕದಲ್ಲಿ ನೆಲೆಸಿರುವ ಡಾ.ಸಂಪತ್‌ಕುಮಾರ ಶಿವಾನಗಿ ಹಾಗೂ ಡಾ.ಉದಯಾ ಶಿವಾನಗಿ ಅವರು ₹8 ಕೋಟಿ ದೇಣಿಗೆ ನೀಡಿದ್ದಾರೆ. ಆಸ್ಪತ್ರೆಗೆ ಅವರ ಹೆಸರನ್ನೇ ಇಡಲಾಗುತ್ತಿದೆ. ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ರೇಡಿಯೊಥೆರಪಿ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆ ಲಭ್ಯ ಇವೆ. ರೋಗಿಗಳಿಗೆ ಅಡ್ಡಪರಿಣಾಮ ಬೀರದಂಥ ಅತ್ಯಾಧುನಿಕ ರೋಬಾಟಿಕ್‌ ಚಿಕಿತ್ಸಾ ವಿಧಾನ ಅಳವಡಿಕೆ ಮಾಡಿ ಕೊಂಡಿದ್ದೇವೆ. ಮುಂಬೈನ ಟಾಟಾ ಮೆಮೋರಿಯಲ್‌ ಆಸ್ಪತ್ರೆಗಿಂತಲೂ ಗುಣಮಟ್ಟದ ವೈದ್ಯಕೀಯ ಸಲಕರಣೆ ಗಳು ನಮ್ಮಲ್ಲಿವೆ’ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿಯೇ ಅತ್ಯಾಧುನಿಕ ಸೌಕರ್ಯ ಹೊಂದಿದ ಅತ್ಯಂತ ಕಡಿಮೆ ದರದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ದೊರೆಯುವ ಆಸ್ಪತ್ರೆ ನಿರ್ಮಿಸಿದ್ದೇವೆ
ಪ್ರಭಾಕರ ಕೋರೆ ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.