ADVERTISEMENT

ತೋಟಗಾರಿಕೆಯಿಂದ ಆರೋಗ್ಯ ಪೂರ್ಣ ಸಮಾಜ: ಡಾ.ಕೆ.ಎನ್. ಕಟ್ಟಿಮನಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 13:26 IST
Last Updated 22 ಡಿಸೆಂಬರ್ 2019, 13:26 IST
ಮೂಡಲಗಿ ತಾಲ್ಲೂಕು ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ಮಾತನಾಡಿದರು
ಮೂಡಲಗಿ ತಾಲ್ಲೂಕು ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ಮಾತನಾಡಿದರು   

ಮೂಡಲಗಿ: ‘ದೇಶದಲ್ಲಿ ಪೌಷ್ಟಿಕ ಭದ್ರತೆಗಾಗಿ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ತೋಟಗಾರಿಕೆ ಬೆಳೆಗಳಿಗೆ ಅಧಿಕ ಆದ್ಯತೆ ನೀಡುವುದು ಅವಶ್ಯವಿದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ಸಲಹೆ ನೀಡಿದರು.

ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಕಾಲೇಜಿನಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ತೋಟಗಾರಿಕಾ ಸುಸ್ಥಿರತೆ ಹಾಗೂ ಪೌಷ್ಟಿಕ ಭದ್ರತೆ’ ಕುರಿತ ರಾಷ್ಟ್ರೀಯ ಸಮ್ಮೇಳನದ ಸಮಾರೋಪದ ಸಮಾರಂಭದಲ್ಲಿ ಮಾತನಾಡಿದರು.

‘ಸಂಶೋಧಕರು ಮತ್ತು ವಿಜ್ಞಾನಿಗಳು ತೋಟಗಾರಿಕೆ ಬೆಳೆಗಳಲ್ಲಿ ದೊರೆಯುವ ಲಾಭದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಳ್ಳಬೇಕು. ರೈತರು ಕನಿಷ್ಠ ಒಂದು ಎಕರೆಯಷ್ಟಾದರೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ಅವರನ್ನು ಉತ್ತೇಜಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಸಮಗ್ರ ಮತ್ತು ಮಿಶ್ರ ಬೇಸಾಯದಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚು ಪೂರಕವಾಗಿವೆ. ರೈತರಿಗೆ ಅವು ವರ್ಷವಿಡೀ ಆದಾಯ ತಂದುಕೊಟ್ಟು ಆರ್ಥಿಕವಾಗಿ ಸಬಲರನ್ನಾಗಿಸುತ್ತವೆ. ಸಮ್ಮೇಳನದಲ್ಲಿ ಚರ್ಚೆಯಾಗಿರುವ, ರೈತರಿಗೆ ಅನುಕೂಲವಾಗುವಂತಹ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಸಾರ್ವತ್ರಿಕವಾಗಿ ಅನುಷ್ಠಾನಗೊಳ್ಳುವಂತೆ ಮಾಡಬೇಕು’ ಎಂದರು.

ಕಾಲೇಜಿನ ಡೀನ್ ಡಾ.ನಾಗೇಶ ನಾಯ್ಕ ಮಾತನಾಡಿ, ‘ಶೈಕ್ಷಣಿಕ ಸಮ್ಮೇಳನಗಳಿಂದ ಸಂಶೋಧಕರಲ್ಲಿ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸುತ್ತದೆ’ ಎಂದು ಅಭಿಪ್ರಾಯಪಟ್ಟರು.

‘2020ರ ಫೆಬ್ರುವರಿಯಲ್ಲಿ ಕಾಲೇಜು 25 ವರ್ಷಗಳನ್ನು ಪೂರೈಸಲಿದ್ದು, ಬೆಳ್ಳಿ ಹಬ್ಬ ಸಂಭ್ರಮವನ್ನು ಆಚರಿಸಲಾಗುವುದು’ ತಿಳಿಸಿದರು.

ಸಂಘಟನಾ ಕಾರ್ಯದರ್ಶಿ ಡಾ.ಕೆ. ರಾಮಚಂದ್ರ ನಾಯ್ಕ ತಾಂತ್ರಿಕ ಪ್ರಬಂಧಗಳ ವಿಶ್ಲೇಷಣೆ ಮಾಡಿದರು. ಡಾ.ವಿ. ಕಾಂತರಾ ಸಮ್ಮೇಳದ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರ ಹೆಸರುಗಳನ್ನು ಪ್ರಕಟಿಸಿದರು.

ದೇಶದ ವಿವಿಧೆಡೆಯಿಂದ ಬಂದಿದ್ದ ಸಂಶೋಧಕರು 250 ಪ್ರಬಂಧಗಳನ್ನು ಮಂಡಿಸಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ ಡಾ.ಮುಕುಂದ ಎಸ್. ಕುಲಕರ್ಣಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಎಸ್.ಐ. ಅಥಣಿ, ಸಹ ಸಂಶೋಧನಾ ನಿರ್ದೇಶಕ ಡಾ.ಡಿ.ಆರ್. ಪಾಟೀಲ, ಧಾರವಾಡ ಕೃಷಿ ವಿವಿಯ ಡಾ.ಪಿ.ಎಲ್. ಪಾಟೀಲ, ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ಸಿ.ಕೆ. ಸುರೇಶ, ಡಾ. ರೋಖಡೆ ಪಾಲ್ಗೊಂಡಿದ್ದರು.

ಡಾ.ಮಹಾಂತೇಶ ನಾಯಕ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಕೆ. ರಾಮಚಂದ್ರ ನಾಯ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.