ADVERTISEMENT

ಸಿಎಎ ವಿರುದ್ಧ ಪ್ರತಿಭಟನೆ: ಮುಖ್ಯಮಂತ್ರಿ, ಪ್ರಧಾನಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 12:34 IST
Last Updated 29 ಜನವರಿ 2020, 12:34 IST

ಬೆಳಗಾವಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿಬಹುಜನ ಕ್ರಾಂತಿ ಮೋರ್ಚಾ ಸಂಘಟನೆ ಕರೆ ನೀಡಿದ ಭಾರತ್ ಬಂದ್‌ ಬೆಂಬಲಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಅಂಜುಮನ್ ಕಾಲೇಜು ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ, ಬಹುಜನ ಕ್ರಾಂತಿ ಮೋರ್ಚಾ,ಜಮಾತ್ ಇಸ್ಲಾಂ ಹಿಂದ್ ಸಂಘಟನೆ, ವಕೀಲರು ಸೇರಿ ವಿವಿಧ ಸಂಘಟನೆಯ ನೂರಾರು ಕಾರ್ಯಕರ್ತರುಭಾಗವಹಿಸಿದ್ದರು.

‘‌ದೇಶದಲ್ಲಿ ಹಿಂದೂ–ಮುಸ್ಲಿಮರು ಸಹೋದರರಂತೆ ಸೌಹಾರ್ದದಿಂದ ಬದುಕುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇಶದ ಜನತೆಯನ್ನು ಧರ್ಮದ ಆಧಾರದ ಮೇಲೆ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಸಂವಿಧಾನ ವಿರೋಧಿಯಾಗಿರುವ ಪೌರತ್ದ ತಿದ್ದುಪಡಿ ಕಾಯ್ದೆ ಹಿಂಪಡೆಯುವರೆಗೂ ಹೋರಾಟ ಮುಂದುವರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ, ಮುಖಂಡರಾದ ಮಹಾಲಿಂಗಪ್ಪ ಆಲಬಾಳ, ನೇಮಿಚಂದ್ರ, ರಾಮಕೃಷ್ಣ ಪಾನಬುಡೆ, ಯುವರಾಜ ತಳವಾರ, ಪ್ರಶಾಂತ ಪೂಜಾರಿ, ಜಮಾತ್ ಇಸ್ಲಾಂ ಹಿಂದ್ ಸಂಘಟನೆಯ ಶಾಹೀದ್ ಮೆಮನ್, ಜುನೇದ್ ಇನಾಮದಾರ್, ದಸಂಸದ ಮಲ್ಲೇಶ ಕಲಾದಗಿ, ಇಲಿಯಾಸ್ ಅಥಣಿ, ಜ್ಯೋತಿ ಕಡ್ಲಸ್ಕರ್ ಇದ್ದರು.

ಮಾರುಕಟ್ಟೆ, ಖಡೇಬಜಾರ್‌ ಸೇರಿದಂತೆ ಹಲವು ಕಡೆಗಳಲ್ಲಿ ಮುಸ್ಲಿಮರು ತಮ್ಮ ಅಂಗಡಿಗಳನ್ನು ಬಂದ್‌ ಮಾಡಿ ಭಾರತ ಬಂದ್‌ಗೆ ಬೆಂಬಲ ಸೂಚಿಸಿದರು. ಸಿಎಎ ವಿರುದ್ಧ ಪ್ರತಿಭಟನೆ ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.