ADVERTISEMENT

ಬೈಪಾಸ್ ಕಾಮಗಾರಿಗೆ ವಿರೋಧ: ಬೆಂಕಿ ಹಚ್ಚಿಕೊಂಡು ಅತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 11:27 IST
Last Updated 11 ನವೆಂಬರ್ 2021, 11:27 IST
ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು
ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು   

ಬೆಳಗಾವಿ: ತಾಲ್ಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡಿರುವುದನ್ನು ವಿರೋಧಿಸಿ, ಮಚ್ಚೆ ಗ್ರಾಮದ ರೈತರು ಗುರುವಾರ ಭಾರಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಆರಂಭವಾಗಿದ್ದ ಕಾಮಗಾರಿ ವಿರೋಧಿಸಿ ಆ ಭಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಅನಿಲ ಅನಗೋಳಕರ ಪುತ್ರ ಪ್ರಕಾಶ ಅನಗೋಳಕರ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆಯಿತು. ಪೊಲೀಸರು, ಬೆಂಕಿ ಹೊತ್ತಿಕೊಂಡಿದ್ದ ಬಟ್ಟೆಗಳನ್ನು ಕಿತ್ತೆಸೆದು ಅವರನ್ನು ರಕ್ಷಿಸಿದರು. ಸುಟ್ಟಗಾಯಗಳಾಗಿರುವ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸಹೋದರ ಅಮಿತ್ ಮರ ಏರಿ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದರು.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಈ ಹಿಂದೆ ಸಮೀಕ್ಷೆ ನಡೆಸಿದ ಜಮೀನಿನ ಜೊತೆಗೆ ಫಲವತ್ತಾದ ಕೃಷಿ ಭೂಮಿಯನ್ನೂ ಸ್ವಾಧೀನಕ್ಕೆ ಪಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜಮೀನು ಕೊಡುವುದಿಲ್ಲ ಎಂದು ತಿಳಿಸಿದರೂ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ರೈತರು ಆರೋಪಿಸಿದರು.

ADVERTISEMENT

ಕಸಿದುಕೊಳ್ಳಬೇಡಿ:‘ನಮ್ಮ ಜಮೀನಿನ ವಿವಾದ ನ್ಯಾಯಾಲಯದಲ್ಲಿದೆ. ಹೀಗಿದ್ದರೂ ಕಾಮಗಾರಿ ಆರಂಭಿಸಲಾಗಿದೆ’ ಎಂದು ಅನಗೋಳಕರ ಸಹೋದರರು ದೂರಿದರು.

ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡ ಪ್ರಕಾಶ್ ನಾಯ್ಕ ನೇತೃತ್ವದಲ್ಲಿ ರೈತರು, ಕುಟುಂಬದ ಮಹಿಳೆಯರು ಪ್ರತಿಭಟಿಸಿದರು. ಜೆಸಿಬಿ ಮೊದಲಾದ ವಾಹನಗಳಿಗೆ ಅಡ್ಡ ಮಲಗಲು ಯತ್ನಿಸಿದರು. ರೈತರೊಬ್ಬರು ಬ್ಯಾಗ್‌ನಲ್ಲಿ ತಂದಿದ್ದ ಕುಡುಗೋಲಿನಿಂದ ಕತ್ತು ಕೊಯ್ದುಕೊಳ್ಳಲು ಯತ್ನಿಸಿದರು. ಅವರಿಂದ ಕುಡುಗೋಲು ಕಸಿದುಕೊಂಡು ಅನಾಹುತ ತಪ್ಪಿಸಲು ಪೊಲೀಸರು ತೀವ್ರ ಹರಸಾಹಸಪಟ್ಟರು. ಹಸುಗೂಸಿನೊಂದಿಗೆ ಬಂದಿದ್ದ ಮಹಿಳೆಯರೊಬ್ಬರು, ಜಮೀನು ಕಸಿದುಕೊಳ್ಳಬೇಡಿ ಎಂದು ಕಣ್ಣೀರಿಟ್ಟರು. ಈ ಎಲ್ಲ ಘಟನೆಗಳಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗುಂಡು ಹಾಕಿ ಬಿಡಿ:ಪ್ರತಿಭಟನೆಯು ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಪೊಲೀಸರು, 30 ಮಂದಿ ರೈತರನ್ನು ವಶಕ್ಕೆ ಪಡೆದರು. ‘ನಮಗೆ ಗುಂಡು ಹಾಕಿ ಬಿಡಿ, ಕೊಂದು ಬಿಡಿ. ಆದರೆ, ಜಮೀನು ಕೊಡುವುದಿಲ್ಲ’ ಎಂದು ರೈತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ರೈತ ಮಹಿಳೆಯರು ಕಣ್ಣೀರಿಡುತ್ತಾ ಪೊಲೀಸರಿಗೆ ಹಿಡಿಶಾಪ ಹಾಕಿದರು.‌ ‘ಮಹಿಳಾ ಪೊಲೀಸರು ನನ್ನ ಸೀರೆ ಹರಿದರು’ ಎಂದು ಮಹಿಳೆಯೊಬ್ಬರು ಆರೋಪಿಸಿದರು. ಸೆರಗು ಹರಿದಿದ್ದನ್ನು ಪ್ರದರ್ಶಿಸಿ ಕಣ್ಣೀರಿಟ್ಟರು.

‘ಬಡ ರೈತರ ಭೂಮಿಯನ್ನು ಸರ್ಕಾರ ದೌರ್ಜನ್ಯದಿಂದ ಕಸಿದುಕೊಳ್ಳುತ್ತಿದೆ. ಪ್ರಶ್ನಿಸುವುದಕ್ಕೆ ಬಂದ ನಮ್ಮ ಮೇಲೆ ಪೊಲೀಸರು ದಬ್ಬಾಳಿಕೆ ಪ್ರದರ್ಶಿಸಿದ್ದಾರೆ. ಎಳೆದಾಡಿದ್ದಾರೆ. ಸೀರೆ ಹರಿದಿದ್ದಾರೆ’ ಎಂದು ರೈತ ಮಹಿಳೆ ಜಯಶ್ರೀ ಗುರನ್ನವರ ದೂರಿದರು.

ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಜೆಸಿಬಿ ಹರಿಸಿ ಕೆಲಸ ಮಾಡುತ್ತಿದ್ದುದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಬೇಡ ಎನ್ನುತ್ತಿದ್ದಾರೆ
ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ಅರಂಭಿಸಿದ್ದಾರೆ. ಆದರೆ, ಅನಗೋಳಕರ ಕುಟುಂಬದವರು ಪರಿಹಾರ ಬೇಡ ಎನ್ನುತ್ತಿದ್ದಾರೆ. ಕಾಮಗಾರಿಗೆ ಅಗತ್ಯವಾದ್ದರಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪರಿಹಾರ ಕಲ್ಪಿಸಲು ಸಿದ್ಧವಿದ್ದೇವೆ.
–ರವೀಂದ್ರ ಕರಲಿಂಗಣ್ಣವರ, ಉಪ ವಿಭಾಗಾಧಿಕಾರಿ, ಬೆಳಗಾವಿ

***

ವಿಚಾರಣೆ ನಡೆಸುತ್ತೇವೆ
ಪ್ರತಿಭಟನಾನಿರತರ ಮೇಲೆ ಪೊಲೀಸರು ಅನುಚಿತವಾಗಿ ವರ್ತಿಸಿಲ್ಲ. ಮಹಿಳಾ ಪ್ರತಿಭಟನಾಕಾರರನ್ನು ಮಹಿಳಾ ಕಾನ್‌ಸ್ಟೆಬಲ್‌ಗಳೆ ವಶಕ್ಕೆ ಪಡೆದಿದ್ದಾರೆ. ಅಮಾನವೀಯವಾಗಿ ನಡೆದುಕೊಂಡಿದ್ದರೆ ವಿಚಾರಣೆ ನಡೆಸಲಾಗುವುದು.
–ವಿಕ್ರಂ ಅಮಟೆ, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.