ADVERTISEMENT

ಬೆಳಗಾವಿ: ಖಾಸಗಿ ಮಾರುಕಟ್ಟೆ ರದ್ದುಪಡಿಸಲು ಆಗ್ರಹ

ಅಧಿಕಾರಿಗಳ ವಿರುದ್ಧ ವರ್ತಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 14:29 IST
Last Updated 3 ಫೆಬ್ರುವರಿ 2022, 14:29 IST
ಬೆಳಗಾವಿಯ ಎಪಿಎಂಸಿಯಲ್ಲಿ ವರ್ತಕರು ಗುರುವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ಎಪಿಎಂಸಿಯಲ್ಲಿ ವರ್ತಕರು ಗುರುವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ನಗರದಲ್ಲಿ ಕಾರ್ಯಾರಂಭಿಸಿರುವ ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ರದ್ದುಗೊಳಿಸುವಂತೆ ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವರ್ತಕರು ಗುರುವಾರ ಪ್ರತಿಭಟನೆ ನಡೆಸಿದರು.

ಎಪಿಎಂಸಿ ಸಭಾಂಗಣದಲ್ಲಿ ಧರಣಿ ನಡೆಸಿದರು. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಖಾಸಗಿ ಮಾರುಕಟ್ಟೆಗೆ ಅಧಿಕಾರಿಗಳು ಅನುಮತಿ ನೀಡುವ ಮೂಲಕ ಸರ್ಕಾರಿ ಮಾರುಕಟ್ಟೆಗೆ ಅನ್ಯಾಯ ಮಾಡಿದ್ದಾರೆ. ಕೂಡಲೇ ಆ ಮಾರುಕಟ್ಟೆಗೆ ನೀಡಿರುವ ಅನುಮತಿ ರದ್ದುಪಡಿಸಬೇಕು. ಇಲ್ಲದಿದ್ದರೆ ಎಪಿಎಂಸಿಯಲ್ಲಿ ಈ ಮುಂಚೆ ಪ್ರತಿ ಮಳಿಗೆಗೆ ನೀಡಿದ್ದ ಹಣವನ್ನು ವರ್ತಕರೆಲ್ಲರಿಗೂ ವಾಪಸ್ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಅಧಿಕಾರಿಗಳ ಬೆಂಬಲವಿದೆ. ವರ್ತಕರು ಅನೇಕ ಬಾರಿ ಕೇಳಿದರೂ ಸಭೆಯನ್ನೇ ಡೆಸಿಲ್ಲ’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಅವರು ಕಾರ್ಯದರ್ಶಿ ಕೆ. ಕೋಡಿಗೌಡ ಹಾಗೂ ಮಹಾಂತೇಶ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಪಿಎಂಸಿ ಆಡಳಿತ ಮಂಡಳಿಯವರನ್ನು ಕೂಡಿ ಹಾಕಲಾಗುವುದು ಎಂದು ಮೋದಗಿ ಹೇಳುತ್ತಿದ್ದಂತೆಯೇ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.

ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ‘ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡದಂತೆ ಎರಡು ಬಾರಿ ಎಪಿಎಂಸಿಯಲ್ಲಿ ಸಭೆ ನಡೆಸಿ ಠರಾವು ಪಾಸ್ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೂ ಪರವಾನಗಿ ನೀಡಿದ್ದಾರೆ. ಅದನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

‘ಖಾಸಗಿ ಮಾರುಕಟ್ಟೆ ಬಂದ್ ಮಾಡುವಂತೆ ಪ್ರಾದೇಶಿಕ ಆಯುಕ್ತ, ಜಿಲ್ಲಾಧಿಕಾರಿ ವರದಿ ನೀಡಿದರೆ ಅದನ್ನು ಬಂದ್ ಮಾಡಬಹುದು. ಖಾಸಗಿ ಮಾರುಕಟ್ಟೆಯಿಂದ ಎಪಿಎಂಸಿಗೆ ತಿಂಗಳಿಗೆ ₹ 2.50 ಲಕ್ಷ ಹಾನಿ ಆಗುತ್ತಿದೆ’ ಎಂದು ತಿಳಿಸಿದರು.

ವರ್ತಕರಾದ ಸತೀಶ ಪಾಟೀಲ, ಸದಾನಂದ ಹುಂಕರಿಪಾಟೀಲ, ಬಸನಗೌಡ ಪಾಟೀಲ, ಆಸೀಫ ಕಲಮನಿ, ಅರ್ಜುನ ನಾಯಿಕವಾಡಿ, ರಾಜು ತಹಶೀಲ್ದಾರ್, ಎಸ್.ಸಿ. ಪಾಟೀಲ, ಎಸ್.ಡಿ. ಲಂಗೋಟಿ, ಅನಿರುದ್ಧ ಕಂಗ್ರಾಳಕರ, ಎಂ.ಎನ್. ಹೊಸಮನಿ, ಬಿ.ಎಂ. ಸುಳೇಭಾವಿ, ಪುಂಡಲೀಕ ಶಿಗ್ಗಾಂವಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.