ADVERTISEMENT

ಸಗಟು ತರಕಾರಿ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ವ್ಯಾಪಾರಿಗಳ ಪ್ರತಿಭಟನೆ

ಹೊರ ಹಾಕಲು ಸಂಚು: ಆರೋಪ

​ಪ್ರಜಾವಾಣಿ ವಾರ್ತೆ
Published 13 ಮೇ 2019, 13:21 IST
Last Updated 13 ಮೇ 2019, 13:21 IST
ಬೆಳಗಾವಿಯ ದಂಡು ಮಂಡಳಿಯಲ್ಲಿ ನಡೆಯುತ್ತಿರುವ ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ವ್ಯಾಪಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ದಂಡು ಮಂಡಳಿಯಲ್ಲಿ ನಡೆಯುತ್ತಿರುವ ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ವ್ಯಾಪಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಇಲ್ಲಿನ ಹಳೆಯ ಪಿ.ಬಿ. ರಸ್ತೆಯ ದಂಡು ಮಂಡಳಿ ಪ್ರದೇಶದಲ್ಲಿ ನಡೆಯುತ್ತಿರುವ ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸುವುದನ್ನು ಖಂಡಿಸಿ ಜೈ ಕಿಸಾನ್ ಸಗಟು ತರಕಾರಿ ವ್ಯಾಪಾರಿಗಳ ಸಂಘದವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಾರುಕಟ್ಟೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

‘ಸಗಟು ತರಕಾರಿ ವ್ಯಾಪಾರಕ್ಕಾಗಿ ನಮಗೆ ಯೋಗ್ಯ ಸ್ಥಳ ಬೇಕೆಂದು ಎಪಿಎಂಸಿ, ಬುಡಾ, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸಂಘದಿಂದ ಮನವಿ ಸಲ್ಲಿಸಿದ್ದೆವು. ನಗರಾಭಿವೃದ್ಧಿ ಇಲಾಖೆಯು ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 10.20 ಎಕರೆ ಜಾಗ ನೀಡಿದೆ. ಈ ಜಮೀನನ್ನು ಕೃಷಿ ಉಪಯೋಗದಿಂದ ಮಾರುಕಟ್ಟೆ ಉದ್ದೇಶಕ್ಕಾಗಿ ಪರಿವರ್ತಿಸಲು ಜಿಲ್ಲಾಧಿಕಾರಿ 2016ರ ನವೆಂಬರ್‌ನಲ್ಲಿ ಪರವಾನಗಿ ನೀಡಿದ್ದಾರೆ. ಜಮೀನು ಖರೀದಿ, ಭೂಪರಿವರ್ತನೆ, ವಿನ್ಯಾಸ ಹಾಗೂ ರಸ್ತೆ, ಬುನಾದಿ ಕಾಮಗಾರಿ ಮೊದಲಾದವುಗಳಿಗೆ ಈಗಾಗಲೇ ₹ 11 ಕೋಟಿ ವೆಚ್ಚವಾಗಿದೆ. ಹೀಗಿರುವಾಗ ಎಪಿಎಂಸಿಯವರು ತಮ್ಮ ಲಾಭಕ್ಕೋಸ್ಕರ ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಒಂದೆಡೆ ಸಂಘದಿಂದ ನಿರ್ಮಿಸುತ್ತಿರುವ ಮಾರುಕಟ್ಟೆ ಕಟ್ಟಡದಲ್ಲಿ ಒಂದಸ್ತಿನ ಕಾಮಗಾರಿ ಮುಗಿದಿದೆ. ಇನ್ನೊಂದೆಡೆ ದಂಡು ಮಂಡಳಿ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ, ನಮ್ಮನ್ನು ಮಳಿಗೆಗಳಿಂದ ಹೊರಹಾಕದಂತೆ ನಿರ್ಬಂಧಕಾಜ್ಞೆಯನ್ನೂ ತಂದಿದ್ದೇವೆ. ಹೀಗಿರುವಾಗ, ನಮ್ಮನ್ನು ಸ್ಥಳಾಂತರಿಸುವುದು, ಪೊಲೀಸರ ಸಹಾಯದೊಂದಿಗೆ ಸಭೆ ನಡೆಸಿ ನೋಟಿಸ್ ಜಾರಿಗೊಳಿಸುವುದು ಸರಿಯೇ?’ ಎಂದು ಕೇಳಿದರು.

‘ದೇಶದ ಯಾವುದೇ ಮೂಲೆಯಲ್ಲಿ ವ್ಯಾಪಾರ, ಉದ್ಯೋಗ ಮಾಡಲು ಮೂಲಭೂತ ಹಕ್ಕಿದೆ. ಇದನ್ನು ಉಲ್ಲಂಘಿಸಿ ಎಪಿಎಂಸಿ ಪ್ರಾಂಗಣದಲ್ಲಿ ಮಾತ್ರವೇ ತರಕಾರಿ ವ್ಯಾಪಾರ ಮಾಡುವಂತೆ ಹೇಳಲಾಗುತ್ತಿದೆ. ಇದಕ್ಕೆ ಸಂಘದ ವಿರೋಧವಿದೆ. ಮುಂದೆ ನಮಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮಳಿಗೆಗಳನ್ನು ಸ್ಥಳಾಂರಿಸಬಾರದು’ ಎಂದು ಅಗ್ರಹಿಸಿ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಯದರ್ಶಿ ಕೆ.ಕೆ. ಬಾಗವಾನ, ಮುಖಂಡ ದಿವಾಕರ ಪಾಟೀಲ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.