ADVERTISEMENT

ಮೀಸಲಾತಿಗಾಗಿ ಮರಾಠಾ ಸಮುದಾಯದಿಂದ ಪ್ರತಿಭಟನೆ: ಸತೀಶ ಜಾರಕಿಹೊಳಿ ಭಾಷಣಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 11:22 IST
Last Updated 20 ಡಿಸೆಂಬರ್ 2022, 11:22 IST
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ಕೊಂಡಸಕೊಪ್ಪ ಗುಡ್ಡದಲ್ಲಿ ಮರಾಠಾ ಸಮುದಾಯದವರು ಮಂಗಳವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ಕೊಂಡಸಕೊಪ್ಪ ಗುಡ್ಡದಲ್ಲಿ ಮರಾಠಾ ಸಮುದಾಯದವರು ಮಂಗಳವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ನಮ್ಮನ್ನು ಪ್ರವರ್ಗ ‘3ಬಿ’ ಪಟ್ಟಿಯಿಂದ ‘2ಎ’ ಪಟ್ಟಿಗೆ ಸೇರ್ಪಡೆಗೊಳಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಕ್ಷತ್ರೀಯ ಮರಾಠಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಮರಾಠಾ ಸಮುದಾಯದವರು ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ಕೊಂಡಸಕೊಪ್ಪ ಗುಡ್ಡದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಹೋರಾಟಕ್ಕೆ ಬೆಂಬಲ ಸೂಚಿಸಲು ಬಂದಿದ್ದ ಶಾಸಕ ಸತೀಶ ಜಾರಕಿಹೊಳಿ ಮಾತು ಆರಂಭಿಸುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಮರಾಠಾ ಸಮುದಾಯದವರು, ಶಿವಾಜಿ ಮಹಾರಾಜರು, ಸಂಭಾಜಿ ಮಹಾರಾಜರ ಪರವಾಗಿ ಘೋಷಣೆ ಕೂಗಲಾರಂಭಿಸಿದರು.

‘ಹಿಂದೂ’ ಪದ, ಸಂಭಾಜಿ ಮಹಾರಾಜರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದೀರಿ. ಇಲ್ಲಿ ನಿಮಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಆ ವಿಷಯವೇ ಬೇರೆ. ಇದೇ ಬೇರೆ’ ಎಂದು ಸತೀಶ ಮನವೊಲಿಕೆಗೆ ಯತ್ನಿಸಿದರೂ, ಜನ ಪಟ್ಟು ಸಡಿಲಿಸಲಿಲ್ಲ. ಕೊನೆಗೇ ಮುಖಂಡರೇ ಮರಾಠಾ ಸಮುದಾಯದವರನ್ನು ಸಮಾಧಾನಪಡಿಸಿದರು.

ADVERTISEMENT

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ, ‘ಕೆಲವರು ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಾರೆ. ಅಂತೆಯೇ ಇಲ್ಲಿಯೂ ಕೇವಲ ನಾಲ್ಕು ಜನರು ವಿರೋಧಿಸಿದ್ದಾರೆ. ರಾಜಕೀಯ ಬದುಕಿನಲ್ಲಿ ಇದೇನೂ ಹೊಸತಲ್ಲ. ಇಲ್ಲಿ ಇಡೀ ಸಮುದಾಯ ಪ್ರತಿಭಟನೆ ಮಾಡುತ್ತಿದೆ. ಆದರೆ, ನಿಪ್ಪಾಣಿಯಲ್ಲಿ ನಡೆದ ಸಭೆಯೇ ಬೇರೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಕೆಲವರು ಅರ್ಥೈಸಿಕೊಳ್ಳಬೇಕು’ ಎಂದರು.

‘ಮರಾಠಾ ಸಮುದಾಯದವರು ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಸದನದಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ’ ಎಂದು ತಿಳಿಸಿದರು.

ಬೆಂಗಳೂರಿನ ಗೋಸಾವಿ ಮಠದ ಮಂಜುನಾಥ ಸ್ವಾಮೀಜಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.