ಸುವರ್ಣ ವಿಧಾನಸೌಧ ಬಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸಿದರು
ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನದ ನಾಲ್ಕನೇ ದಿನವಾದ ಶುಕ್ರವಾರ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಸರಣಿ ಪ್ರತಿಭಟನೆಗಳು ನಡೆದವು. ನೇಕಾರರು, ಅತಿಥಿ ಶಿಕ್ಷಕರು, ರೈತರು, ಮಾಜಿ ದೇವದಾಸಿಯರು ಸೇರಿದಂತೆ ವಿವಿಧ ಸಂಘಟನೆಯವರು ಪ್ರತಿಭಟಿಸಿದರು.
ನೇಕಾರರಿಗೂ ಗುರುತಿನಚೀಟಿ ಕೊಡಿ: ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ವೃತ್ತಿಪರ ನೇಕಾರರಿಗೆ ಗುರುತಿನ ಚೀಟಿ ನೀಡಿ, ವಿವಿಧ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದವರು ಪ್ರತಿಭಟನೆ ನಡೆಸಿದರು.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ 53 ನೇಕಾರರ ಕುಟುಂಬದವರಿಗೆ ತಲಾ ₹10 ಲಕ್ಷ ಪರಿಹಾರ ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳಲ್ಲಿರುವ ನೇಕಾರರ ಸಾಲಮನ್ನಾ ಮಾಡಬೇಕು. ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಮರುತನಿಖೆ ಕೈಗೊಳ್ಳಬೇಕು. 55 ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಸಿಕ ₹5 ಸಾವಿರ ಮಾಸಾಶನ ಕೊಡಬೇಕು. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಮಾದರಿಯಲ್ಲಿ ನೇಕಾರರಿಗೆ ವಿಣಕರ ಸಮ್ಮಾನ್ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಶಿವಲಿಂಗ ಟಿರಕಿ, ರಾಜೇಂದ್ರ ಮಿರ್ಜಿ, ರಾಜು ಧಡಿ, ಅರ್ಜುನ ಕುಂಬಾರ, ಭೀಮರಾವ್ ಖೋತ ಇದ್ದರು.
ಸೇವಾಭದ್ರತೆ ಒದಗಿಸಿ: ತಮಗೆ ಸೇವಾಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದವರು ಪ್ರತಿಭಟನೆ ಮಾಡಿದರು.
ಅತಿಥಿ ಶಿಕ್ಷಕರಾಗಿ ಹಲವು ವರ್ಷಗಳಿಂದ ನಾವು ಸಲ್ಲಿಸುತ್ತಿರುವ ಸೇವೆ ಕಾಯಂಗೊಳಿಸಬೇಕು. ಇದಕ್ಕಾಗಿ ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಹೆಜ್ಜೆ ಇರಿಸಬೇಕು. ಬೇಸಿಗೆ ರಜೆಯನ್ನೂ ಸೇರಿ ವರ್ಷದ 12 ತಿಂಗಳಿಗೂ ಗೌರವಧನ ನೀಡಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಗೌರವಧನ ಹೆಚ್ಚಿಸಬೇಕು. ಅತಿಥಿ ಶಿಕ್ಷಕ ಎಂಬ ಪದ ತೆಗೆದುಹಾಕಿ, ಗೌರವ ಅಥವಾ ಅರೆಕಾಲಿಕ ಶಿಕ್ಷಕನೆಂದು ನಮ್ಮನ್ನು ಕರೆಯಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎನ್.ಅನಂತನಾಯ್ಕ, ಹನುಮಂತ ಎಚ್.ಎಸ್., ಲೋಲಾಕ್ಷಿ, ಬಸವರಾಜ ಕರಡಿಗುಡ್ಡ, ಗಂಗಾಧರ ಕಟ್ಟೆಕರ, ಸೌಮ್ಯ ಎಚ್.ಎಸ್. ಇತರರಿದ್ದರು.
ಸೇವೆ ಕಾಯಂಗೊಳಿಸಿ: ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು(ಎಂಆರ್‌ಡಬ್ಲ್ಯು), ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು(ವಿಆರ್‌ಡಬ್ಲ್ಯು) ಮತ್ತು ನಗರ ಪುನರ್ವಸತಿ ಕಾರ್ಯಕರ್ತರ (ಯುಆರ್‌ಡಬ್ಲ್ಯು) ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ, ನವ ಕರ್ನಾಟಕ ಎಂಆರ್‌ಡಬ್ಲ್ಯು/ವಿಆರ್‌ಡಬ್ಲ್ಯು/ಯುಆರ್‌ಡಬ್ಲ್ಯು ಸಂಘದವರು ಪ್ರತಿಭಟಿಸಿದರು.
‘ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ರಾಜ್ಯದಲ್ಲಿ 6,860 ಕಾರ್ಯಕರ್ತರು ಗೌರವಧನ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ವಹಿಸಿದ ಕೆಲಸ ಸರಿಯಾಗಿ ನಿರ್ವಹಿಸಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಹಿತ ಕಾಯುತ್ತಿದ್ದೇವೆ. ಆದರೆ, ಸರ್ಕಾರ ನಮ್ಮನ್ನೇ ಕಡೆಗಣಿಸಿದೆ. ತಕ್ಷಣವೇ ನಮ್ಮ ಸೇವೆ ಕಾಯಂಗೊಳಿಸಬೇಕು. ಆ ಬೇಡಿಕೆ ಈಡೇರುವವರೆಗೆ ಕನಿಷ್ಠ ವೇತನ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಫಕೀರಗೌಡ ಪಾಟೀಲ, ಅಂಬಾಜಿ ಮೇಟಿ, ದತ್ತಾತ್ರೇಯ ಕುಡಕಿ, ಪ್ರವೀಣ ನಾಯ್ಕ ನೇತೃತ್ವ ವಹಿಸಿದ್ದರು.
ಸುತ್ತೋಲೆ ಹಿಂಪಡೆಯಿರಿ: ರಾಜ್ಯದಲ್ಲಿ ಖಾಸಗಿ ಕೊಳಚೆ ಪ್ರದೇಶಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ–ಕರ್ನಾಟಕ ಸಂಘಟನೆಯವರು ಪ್ರತಿಭಟಿಸಿದರು.
ಕೊಳಚೆ ಪ್ರದೇಶಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ, 2025–26ನೇ ಸಾಲಿನ ಬಜೆಟ್‌ನಲ್ಲಿ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ₹500 ಕೋಟಿ ಮೀಸಲಿಡಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸ್ಲಂ ನಿವಾಸಿಗಳಿಗಾಗಿ ನಿರ್ಮಿಸುತ್ತಿರುವ ವಸತಿ ಸಮುಚ್ಛಯಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಸ್ಲಂ ಜನರ ಪರವಾಗಿ ಕಳಕಳಿ ಉಳ್ಳವರನ್ನು ವಸತಿ ಸಚಿವರಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ನೇಮಕಾತಿಯಾಗಲಿ: ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರು, ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ಸ್ ಅಸೋಸಿಯೇಷನ್‌ನವರು ಪ್ರತಿಭಟನೆ ಮಾಡಿದರು.
ಹಲವು ವರ್ಷಗಳಿಂದ ಈ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯದ್ದರಿಂದ ಉದ್ಯೋಗಾಕಾಂಕ್ಷಿಗಳು ಪರದಾಡುವಂತಾಗಿದೆ. ಕನಿಷ್ಠ ಸಂಬಳಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವಂತಾಗಿದೆ ಎಂದು ಅಲವತ್ತುಕೊಂಡರು.
ಮುಖಂಡರಾದ ಕಾಂತಕುಮಾರ್, ಎಂ.ಎಸ್.ಶ್ರೇಯಸ, ಜೆ.ಸಂಜಯಕುಮಾರ, ಲಕ್ಷ್ಮಣ ತುಕ್ಕನ್ನವರ ಇತರರಿದ್ದರು.
ಹಕ್ಕುಪತ್ರ ವಿತರಿಸಿ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ 9 ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿನ ಪಹಣಿ ಪತ್ರಗಳಲ್ಲಿ ಆಯಾ ರೈತರ ಹೆಸರು ನಮೂದಿಸಿ, ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ, ಬಗರ್‌ಹುಕುಂ ಸಾಗುವಳಿ ರೈತರ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದರು.
ಕುಲವಳ್ಳಿ, ಗಲಗಿನಮಡ, ಕತ್ರಿದಡ್ಡಿ, ದಿಂಡಲಕೊಪ್ಪ, ನಿಂಗಾಪುರ, ಸಾಗರ, ಗಂಗ್ಯಾನಟ್ಟಿ, ಮಾಚಿ, ಕುಲವಳ್ಳಿ ಪ್ಲಾಂಟೇಷನ್‌ನ ರೈತರು ಸಾಗುವಳಿ ಮಾಡುತ್ತಿರುವ ಜಮೀನಿನ ಹಕ್ಕುಪತ್ರಗಳನ್ನು ಇನ್ನೂ ವಿತರಿಸಿಲ್ಲ. 2016-17ನೇ ಸಾಲಿನಿಂದ ಹೋರಾಟ ಮಾಡುತ್ತಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು.
ಮುಖಂಡರಾದ ಬೈಲಪ್ಪ ದಳವಾಯಿ, ಭಿಷ್ಟಪ್ಪ ಶಿಂಧೆ, ನಾಗಪ್ಪ ಹುಂಡಿ, ನಿಂಗಪ್ಪ ದಿವಟಗಿ, ರವಿರಾಜ ಕಂಬಳಿ, ಕಾಶೀಮ್ ನೇಸರಗಿ, ಅರ್ಜುನ ಮಡಿವಾಳರ, ಶಿವಮೂರ್ತಿ ಜಿಡ್ರಾಳಿ ಇತರರಿದ್ದರು.
ಎಸ್‌ಟಿ ಪಟ್ಟಿಗೆ ಸೇರಿಸಿ: ಅಂಬಿಗ, ಕೋಲಿ, ಕಬ್ಬಲಿಗ, ಬೆಸ್ತ ಜಾತಿಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ, ಅಖಿಲ ಕರ್ನಾಟಕ ಬೆಸ್ತರ ಕೋಲಿ ಅಂಬಿಗರ ಚೌಡಯ್ಯ ಜಾತಿ ಮೀಸಲಾತಿ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದರು.
ಟೋಕರೆ ಕೋಳಿ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣಪತ್ರ ನೀಡಲು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಆದೇಶ ಹೊರಡಿಸಬೇಕು. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹100 ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಪ್ರೊ. ಸಾಬಣ್ಣ ತಳವಾರ, ಯಮನಪ್ಪ ಮಡಿಕೇರ ಇತರರಿದ್ದರು.
ವ್ಯವಸಾಯಕ್ಕೆ ಜಮೀನು ಕೊಡಿ: ರಾಜ್ಯದಲ್ಲಿ ಇರುವ ಸುಮಾರು 48 ಸಾವಿರ ಮಾಜಿ ದೇವದಾಸಿಯರಿಗೆ ವ್ಯವಸಾಯಕ್ಕಾಗಿ 2 ಎಕರೆ ಜಮೀನು ನೀಡಬೇಕು ಎಂದು ಒತ್ತಾಯಿಸಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಯವರು ಪ್ರತಿಭಟನೆ ನಡೆಸಿದರು.
ಮಾಜಿ ದೇವದಾಸಿಯರು ಸ್ವಯಂಉದ್ಯೋಗ ಕೈಗೊಳ್ಳಲು ಮತ್ತು ಕೃಷಿ ಮಾಡಲು ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು. ಅಂತ್ಯೋದಯ ಪಡಿತರ ಚೀಟಿ ಕೊಡಬೇಕು. ಸ್ವಂತ ಸೂರು ಹೊಂದಿರದವರಿಗೆ ಮನೆ ನಿರ್ಮಿಸಿಕೊಡಬೇಕು. ಈಗ ನೀಡುತ್ತಿರುವ ಮಾಸಾಶನ ಹೆಚ್ಚಿಸುವ ಜತೆಗೆ, ಪ್ರತಿ ತಿಂಗಳು ಸಕಾಲಕ್ಕೆ ಜಮೆಗೊಳಿಸಬೇಕು ಎಂದು ಆಗ್ರಹಿಸಿದರು. ಸೀತವ್ವ ಜೋಡಟ್ಟಿ ನೇತೃತ್ವ ವಹಿಸಿದ್ದರು.
ವರ್ಗಾವಣೆಗೆ ಅವಕಾಶ ಕಲ್ಪಿಸಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹೊಸ ತಂತ್ರಾಂಶದಲ್ಲಿ ಕಟ್ಟಡ ಕಾರ್ಮಿಕರು ಪಡೆದಿರುವ ಗುರುತಿನ ಚೀಟಿಗಳನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಹಿಂದ್ ಮಜ್ದೂರ್ ಸಭಾ ಸಂಯೋಜಿತ ಸಂಘದವರು ಪ್ರತಿಭಟನೆ ಮಾಡಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪ ದೂರು ದಾಖಲಾದಾಗ ಮೇಲಧಿಕಾರಿಗಳು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಪ್ರಕಾಶ ದಾನಪ್ಪನವರ, ಅಜಯಕುಮಾರ ಹಡಪದ, ಮೌಲಾಅಲಿ ಮುಲ್ಲಾನವರ, ರಹಮತ್‌ಉಲ್ಲಾ ತುರ್ಚಘಟ್ಟ ಇತರರಿದ್ದರು.
ಅನುಭವ ಉಳ್ಳವರನ್ನು ಪರಿಗಣಿಸಿ: ಟೆಂಡರ್ ಪ್ರಕ್ರಿಯೆಯಲ್ಲಿ ಕೆಟಿಪಿಪಿ ಅಧಿನಿಯಮದ ಕಾಯ್ದೆ ಪ್ರಕಾರ, ನಿರ್ದಿಷ್ಟವಾಗಿ ಪಾಳಿ ಮತ್ತು ಟೆಂಡರ್ ನಿರ್ವಹಣಾ ಕೆಲಸದಲ್ಲಿ ಕನಿಷ್ಠ ಒಂದು ವರ್ಷ ಅನುಭವ ಹೊಂದಿದವರನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ, ರಾಜ್ಯ ಸೂಪರ್‌ಗ್ರೇಡ್ ವಿದ್ಯುತ್ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘದವರು ಧರಣಿ ನಡೆಸಿದರು.
ವಿದ್ಯುತ್ ಸ್ಥಾವರಗಳಲ್ಲಿ ಅವಘಡ ಸಂಭವಿಸಿ ಸಾವು–ನೋವು ಉಂಟಾದಾಗ, ಸಂತ್ರಸ್ತರಿಗೆ ಕೆಪಿಟಿಸಿಎಲ್ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ನಾಗೇಂದ್ರ ಎಚ್.ಬಿ., ಕೃಷ್ಣೇಗೌಡ ನೇತೃತ್ವ ವಹಿಸಿದ್ದರು.
ಮಹದಾಯಿ ಯೋಜನೆ ಜಾರಿಗೊಳಿಸಿ: ಮಹದಾಯಿ, ಕಳಸಾ–ಬಂಡೂರಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಹೋರಾಟ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಕೃಷಿಭೂಮಿಗೆ 24x7 ಮಾದರಿಯಲ್ಲಿ ವಿದ್ಯುತ್ ಸೌಕರ್ಯ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಕರ್ಯ ಒದಗಿಸಬೇಕು. ಜತೆಗೆ, ನುರಿತ ವೈದ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಸಲೀಮ್ ಸಂಗನಮಲ್ಲಾ, ಎಸ್.ಎಂ.ರೋಣ, ಲಕ್ಷ್ಮಣ ಬಕಾಯಿ, ಭೀಮಪ್ಪ ಕಸಾಯಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.