ADVERTISEMENT

ಬೆಳಗಾವಿಯಲ್ಲಿ ಬಾಬಾ ರಾಮದೇವ್ ವಿರುದ್ಧ ಎಐಡಿಎಸ್‌ಒನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 12:37 IST
Last Updated 9 ಜೂನ್ 2021, 12:37 IST
ಎಐಡಿಎಸ್‌ಒ ನಡೆಸಿದ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಪಾಲ್ಗೊಂಡರು
ಎಐಡಿಎಸ್‌ಒ ನಡೆಸಿದ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಪಾಲ್ಗೊಂಡರು   

ಬೆಳಗಾವಿ: ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಕೊರೊನಾ ಯೋಧರ ಮೇಲಿನ ದಾಳಿಯ ವಿರುದ್ಧ ಹಾಗೂ ಬಾಬಾ ರಾಮದೇವ್ ಅವರ ಅವೈಜ್ಞಾನಿಕ ಹೇಳಿಕೆಗಳನ್ನು ಖಂಡಿಸಿ ಎಐಡಿಎಸ್‌ಒನಿಂದ ಅಖಿಲ ಭಾರತ ಪ್ರತಿಭಟನಾ ದಿನ ಆಚರಿಸಲಾಯಿತು.

‘ಬೆಳಗಾವಿ ಸೇರಿದಂತೆ ರಾಜ್ಯ, ದೇಶದಾದ್ಯಂತ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು ಹೋರಾಟದಲ್ಲಿ ಭಾಗಿಯಾದರು. ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು’ ಎಂದು ಜಿಲ್ಲಾ ಸಂಘಟಕ ಮಹಾಂತೇಶ ಬಿಳೂರ ತಿಳಿಸಿದ್ದಾರೆ.

‘ಸರ್ಕಾರದ ಸಹಕಾರವು ಅನೇಕ ಅವೈಜ್ಞಾನಿಕ ಔಷಧಿ ಮತ್ತು ಕೋವಿಡ್-19 ಚಿಕಿತ್ಸೆಯ ಕುರಿತ ಪ್ರಸಾರಕ್ಕೆ ಕಾರಣವಾಗಿದೆ. ಕೊರೊನ ಯೋಧರು ಹಗಲು–ರಾತ್ರಿ ಎನ್ನದೇ, ದಣಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ, ಅವೈಜ್ಞಾನಿಕ ಹೇಳಿಕೆಗಳು ಆಧುನಿಕ ಔಷಧಿ ವೈದ್ಯರ ಬಗ್ಗೆ ಅವಹೇಳನಕಾರಿಯಲ್ಲದೇ ಬೇರೇನೂ ಅಲ್ಲ. ವೈಜ್ಞಾನಿಕ ಚಿಕಿತ್ಸೆಗೆ ಇಂತಹ ಬೆಳವಣಿಗೆಗಳು ಹಾನಿಕಾರಕವಾಗಿವೆ. ಸಾಮಾನ್ಯ ಪ್ರಜ್ಞೆಯುಳ್ಳವರು ಮತ್ತು ಆರೋಗ್ಯ ಕಾರ್ಯಕರ್ತರು ಇಂತಹ ಬೆಳವಣಿಗೆಗಳ ಬಗ್ಗೆ ಚಿಂತಿತರಾಗಿದ್ದಾರೆ’ ಎಂದು ಕಳವಳ ವ್ಯಕ್ತವಾಯಿತು.

ADVERTISEMENT

‘ಅಪಪ್ರಚಾರವು, ಆರೋಗ್ಯ ಸಿಬ್ಬಂದಿಗೆ ಕೆಲಸ ಮಾಡಲು ಪ್ರತಿಕೂಲ ವಾತಾವರಣ ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಗ್ಯ ಕಾರ್ಯಕರ್ತರಿಗೆ ಭದ್ರತೆ ಖಾತ್ರಿಪಡಿಸಬೇಕು. ಎಲ್ಲ ಹಂತದಲ್ಲೂ ಆರೋಗ್ಯ ಸೌಲಭ್ಯಗಳ ಮೂಲಸೌಕರ್ಯವನ್ನು ಸುಧಾರಿಸಬೇಕು’ ಎಂದು ಸರ್ಕಾರವನ್ನು ಆಗ್ರಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.