ADVERTISEMENT

ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಲು ಆಗ್ರಹ

ಗೌಂಡವಾಡದ ಸತೀಶ ಕೊಲೆ: ಜಿಲ್ಲಾಧಿಕಾರಿ ಕಚೇರಿ ಮುಂದೆ ತಾಯಿ, ಪತ್ನಿ, ಸಹೋದರಿಯರ ಧರಣಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 3:59 IST
Last Updated 23 ಜೂನ್ 2022, 3:59 IST
ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗಲಭೆಯಲ್ಲಿ ಕೊಲೆಯಾದ ಸತೀಶ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಆಕ್ರೋಶ ಹೊರಹಾಕಿದರು
ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗಲಭೆಯಲ್ಲಿ ಕೊಲೆಯಾದ ಸತೀಶ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಆಕ್ರೋಶ ಹೊರಹಾಕಿದರು   

ಬೆಳಗಾವಿ: ತಾಲ್ಲೂಕಿನ ಗೌಂಡವಾಡದ ಸತೀಶ ಪಾಟೀಲ ಹತ್ಯೆ ಮಾಡಿದವರಿಗೆ ಗಲ್ಲುಶಿಕ್ಷೆ ಕೊಡಿಸಬೇಕು, ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು, ಗ್ರಾಮದ ಹೆಣ್ಣುಮಕ್ಕಳ ರಕ್ಷಣೆಗೆ ಭದ್ರತೆ ಹೆಚ್ಚಿಸಬೇಕು, ದೇವಸ್ಥಾನದ ಜಮೀನು ಒತ್ತುವರಿ ತೆರವು ಮಾಡಬೇಕು ಎಂದು ಆಗ್ರಹಿಸಿ, ನಗರದಲ್ಲಿ ಬುಧವಾರ ಊರಿನ ಹಲವು ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೊಲೆಯಾದ ಸತೀಶ ಅವರ ತಾಯಿ ನಳಿನಿ, ತಂದೆ ರಾಜೇಂದ್ರ, ಪತ್ನಿ ಸ್ನೇಹಾ, ಸಹೋದರಿಯರಾದ ನೀತಾ, ಸರಿತಾ ಮುಂದಾಳತ್ವದಲ್ಲಿ ಬಂದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡಿದರು.

‘ಧರ್ಮವೀರ ಸತೀಶ ಪಾಟೀಲ ಅಮರ್‌ ರಹೆ, ಸತೀಶ ಕೊಂದವರಿಗೆ ಗಲ್ಲುಶಿಕ್ಷೆ ನೀಡಿ, ನ್ಯಾಯ ಕೊಡಿ ಅಥವಾ ನಮ್ಮ ಜೀವ ತೆಗೆಯಿರಿ...’ ಎಂದು ಘೋಷಣೆ ಮೊಳಗಿಸಿದರು.

ADVERTISEMENT

‘ನನ್ನ ಮಗ ಯಾರಿಗೂ ಅನ್ಯಾಯ ಮಾಡುವವನಲ್ಲ. ನಾಲ್ಕು ಅಕ್ಷರ ಕಲಿತಿದ್ದಾನೆಂದು ಊರಿನ ಜನ ಅವನ ಸಹಾಯ ಕೇಳಿದರು. ಊರ ದೇವಸ್ಥಾನದ 27 ಎಕರೆ ಜಮೀನನ್ನು ಆರೋಪಿಗಳು ಕಬಳಿಸಿದ್ದಾರೆ. ಆ ಜಮೀನನ್ನು ದೇವಸ್ಥಾನಕ್ಕೇ ಕೊಡಿಸಬೇಕು ಎಂದು ಹೋರಾಟ ಮಾಡಿದ. ಊರಿಗೆ ಉಪಕಾರ ಮಾಡಲು ಹೋಗಿ ನನ್ನ ಕೂಸು ಪ್ರಾಣ ಬಿಟ್ಟಿತು’ ಎಂದು ಸತೀಶ ತಾಯಿ ನಳಿನಿ ಅಲವತ್ತುಕೊಂಡರು.

‘ಮಗನ ಕೊಂದವರು ಇನ್ನೂ ಊರಲ್ಲೇ ಓಡಾಡುತ್ತಿದ್ದಾರೆ. ಒಂದು ತಿಂಗಳ ಒಳಗಾಗಿ ಇನ್ನೂ ಎರಡು ಹೆಣ ಕೆಡವುತ್ತೇವೆ ಎಂದು ಕೂಗಾಡುತ್ತಿದ್ದಾರೆ. ಜನ ಭಯದಲ್ಲೇ ಬದುಕುವಂತಾಗಿದೆ. ಆರೋಪಿಗಳನ್ನು ಪೊಲೀಸರು ಏನೂ ಮಾಡುತ್ತಿಲ್ಲ. ಅವರೆಲ್ಲ ದುಡ್ಡಿದ್ದವರು, ಅರಾಮಾಗಿದ್ದಾರೆ. ಬಡವರ ಮಗನ ಜೀವಕ್ಕೆ ಬೆಲೆಯೇ ಇಲ್ಲವೇ?’ ಎಂದೂ ಗೋಳಾಡಿದರು.

ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಸತೀಶ ಪತ್ನಿ ಸ್ನೇಹಾ, ‘ಪತಿಯನ್ನು ಕೊಲ್ಲಲು ಮೂರು ಬಾರಿ ಯತ್ನ ನಡೆದಿತ್ತು. ನಮಗೆ ರಕ್ಷಣೆ ಕೊಡಿ ಎಂದು ಪೊಲೀಸರ ಬಳಿ ಬೇಡಿಕೊಂಡಿದ್ದೆ. ಕಾಕತಿ ಪಿಎಸ್‌ಐ, ಸಿಪಿಐ ಈ ವಿಷಯ ಗಂಭೀರವಾಗಿ ಪರಿಗಣಿಸಲಿಲ್ಲ. ನನ್ನ ಗಂಡ ಸಾಯಲು ಇವರ ನಿರ್ಲಕ್ಷ್ಯವೂ ಕಾರಣ. ನನ್ನ ಕಣ್ಣಿನ ಮುಂದೆಯೇ ಪತಿಯನ್ನು ಕೊಚ್ಚಿ ಹಾಕಿದರು. ಈಗ ಎಲ್ಲಿಂದ ತಂದುಕೊಡುತ್ತೀರಿ ಅವನನ್ನು’ ಎಂದು ದೂರಿದರು.

‘ಆರೋಪಿಗಳ ಮನೆಯ ಪಕ್ಕದಲ್ಲೇ ಕುಡಿಯುವ ನೀರಿನ ಟ್ಯಾಂಕ್‌ ಇದೆ. ನೀರು ತರಲು ಹೋಗುವ ಹೆಣ್ಣುಮಕ್ಕಳ ಜೊತೆಗೂ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ನಮ್ಮ ಮಾನ ಕಾಪಾಡುವ ಸಲುವಾಗಿ ಸತೀಶ ಹೋರಾಡುತ್ತಿದ್ದ. ಔಷಧಿ ಅಂಗಡಿ ಇಟ್ಟುಕೊಂಡು, ಕೊರೊನಾ ಸಂದರ್ಭದಲ್ಲಿ ಹಲವರ ಪ್ರಾಣ ಉಳಿಸುವ ಕೆಲಸ ಮಾಡಿದ್ದ. ಈಗ ಅವನ ಜೀವವವನ್ನೇ ತೆಗೆದರು’ ಎಂದು ಮಹಿಳೆಯರು ಒಕ್ಕೊರಲಿನಿಂದ ಹೇಳಿದರು.

ವಕೀಲರಾದ ಪ್ರಿಯಾಂಕಾ ರಾಜಗೋಳ, ಪೂಜಾ, ಕುಟುಂಬದವರಾದ ರೋಷ್ನಿ, ಸುಮನಾ, ಶೀಲಾ, ಮೈರಾ ಸೇರಿದಂತೆ ಹಲವರು ಮಾತನಾಡಿದರು.

*

ಡಿ.ಸಿ. ಕಚೇರಿ ಮುಂದೆ ತಾಸುಗಟ್ಟಲೇ ರೋದನ

ರಾಣಿ ಚನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತರು. ಸತೀಶ ತಾಯಿ, ಪತ್ನಿ, ಇಬ್ಬರು ಸಹೋದರಿಯರು, ಸಂಬಂಧಿಕರ ಆಕ್ರಂದನ ಹೇಳತೀರದಾಯಿತು.

‘ನನ್ನ ಕೂಸು, ನನ್ನ ಕೂಸು...’ ಗೋಗರೆಯುತ್ತಿದ್ದ ತಾಯಿ ಸ್ಥಿತಿಗೆ ಜನ ಮಮ್ಮಲ ಮರುಗಿದರು. ತೀವ್ರ ನಿತ್ರಾಣಗೊಂಡಿದ್ದ ಪತ್ನಿ ಸ್ನೇಹಾ ಗಂಟಲುನೋವಿನಿಂದ ಮಾತು ಬಾರದೇ ಕೈಸನ್ನೆಯಲ್ಲೇ ನೋವು ತೋಡಿಕೊಂಡರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮುಂದೆ ಕೈಮುಗಿದು ‘ನ್ಯಾಯದ ಭಿಕ್ಷೆ ಕೊಡಿ’ ಎಂದು ಪರಿಪರಿಯಾಗಿ ಬೇಡಿಕೊಂಡರು.

*

25 ಮಂದಿ ಮೇಲೆ ಕೇಸ್, 10 ಜನರ ಬಂಧನ

ಗೌಂಡವಾಡ ಗ್ರಾಮದ ಅಷ್ಟೇಕರ್, ಸಾಂಬ್ರೇಕರ್, ಪಾಟೀಲ, ನಿಲಜಕರ, ಮುತಗೇಕರ, ಕುಟ್ರೆ, ಚೌಗುಲೆ ಎಂಬ ಕುಟುಂಬಗಳ ಒಟ್ಟು 25 ಮಂದಿ ಮೇಲೆ ಸತೀಶ ಕೊಲೆ ಆರೋಪದ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ 10 ಮಂದಿಯನ್ನು ಬಂಧಿಸಲಾಗಿದ್ದು, 15 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ಊರಿನಲ್ಲಿ ಗಲಭೆ ನಡೆಸಿದ್ದು ಕೂಡ ಕೊಲೆ ಆರೋಪಿಗಳೇ. ಆದರೆ, ಪೊಲೀಸರು ಅಮಾಯಕರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಕೂಡಲೇ ಬಿಡಬೇಕು. ನಿಜವಾದ ಆರೋಪಿಗಳನ್ನು ಬಂಧಿಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.

*

‘ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇನೆ’

‘ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನದ 27 ಎಕರೆ ಜಮೀನು ಅತಿಕ್ರಮಣ ಮಾಡಿದ್ದಾರೆ ಎಂಬ ವಿಚಾರವಾಗಿ ಗಲಭೆ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತಲೆಮರೆಸಿಕೊಂಡ ಎಲ್ಲರನ್ನು ಶೀಘ್ರ ಬಂಧಿಸಲಾಗುವುದು.ಕೊಲೆಯಾದ ವ್ಯಕ್ತಿ ಕುಟುಂಬಕ್ಕೆ ನ್ಯಾಯ ಕೊಡಿಸಲಾಗುವುದು. ಜಮೀನನ್ನು ಆರೋಪಿಗಳು 20 ವರ್ಷಗಳಿಂದ ಉಳುಮೆ ಮಾಡಿದ್ದಾರೆ ಎಂಬ ಮಹಿತಿ ಇದೆ. ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಅಲ್ಲಿಯೇ ಬಗೆಹರಿಯಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.