ರಾಮದುರ್ಗ: ಕೇಂದ್ರ ಸರ್ಕಾರವು ಹಿಂದಿರುವ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿ ದುಡಿಯುವ ಜನರನ್ನು ಗುಲಾಮಗಿರಿಗೆ ತಳ್ಳುತ್ತಿರುವ ನೀತಿಯನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ಮಿನಿ ವಿಧಾನ ಸೌಧದ ಮುಂಭಾಗದ ಅಂಬೇಡ್ಕರ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿದರು.
ಒಂದೂವರೆ ಗಂಟೆ ಪ್ರತಿಭಟನೆ ನಡೆಸಿದ ಕಾರ್ಮಿಕ ಮುಖಂಡರನ್ನು ಬಂಧಿಸಿದ ನಂತರ ಬಿಡುಗಡೆ ಮಾಡಿದರು.
ಕಾರ್ಮಿಕ ಮುಖಂಡ ಗೈಬು ಜೈನೆಖಾನ ಮಾತನಾಡಿ, ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಬಂಡವಾಳದಾರರ ಪರವಾಗಿ ತಿದ್ದುಪಡಿ ಮಾಡಿ ಅದನ್ನು ಜಾರಿ ಮಾಡಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿದೆ. 2019-20ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ್ದು ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನದಿಂದ ಕಾರ್ಮಿಕ ಪ್ರತಿರೋಧ ಎದುರಿಸಬೇಕಾದ ಭಯದಲ್ಲಿರುವ ಮೋದಿ ಸರ್ಕಾರ ಇದನ್ನು ರಾಜ್ಯಗಳ ತಲೆಗೆ ಕಟ್ಟಿ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವೂ ಸಹ ಕೇಂದ್ರದ ಹಾದಿಯಲ್ಲಿ ನಡೆದು ಕೇಂದ್ರ ಕಾರ್ಮಿಕ ಸಂಹಿತೆಗಳ ಜಾರಿಯ ಮೊದಲೇ 12 ಗಂಟೆ ಕೆಲಸ ಮಾಡಬೇಕು ಎಂದು ಕೈಗಾರಿಕಾ ಕಾಯ್ದೆ 1947, 1948, 1970ರ ವಾಣಿಜ್ಯ ಸಂಸ್ಥೆ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದೆ ಎಂದು ದೂರಿದರು.
ಕಾರ್ಮಿಕ ಮುಖಂಡರಾದ ನಾಗಪ್ಪ ಸಂಗೊಳ್ಳಿ ಮಾತನಾಡಿದರು. ಸರಸ್ವತಿ ಮಾಳಶೆಟ್ಟಿ ಸ್ವಾಗತಿಸಿದರು. ವೀರಭದ್ರ ಕಂಪ್ಲಿ ವಂದಿಸಿದರು.
ಹನಮಂತ ಜಾಧವ,ಮಾರುತಿ ಮುದಗುರಿ,ದೀಲಿಪ್ ಬೋವಿ, ಕೇಶವ ದಾಸರ, ಕಲ್ಪನಾ ಮರಡಿಮಠ, ಬೋರವ್ವ ತೆಕ್ಕಿ,ತುಳಸಮ್ಮ ಮಾಳದಕರ, ರುಕ್ಮವ್ವ ಬಿಜ್ಜನ್ನವರ,ಫಾರೂಖ್ ಶೇಖ್, ಮಹೆಬೂಬ ನದಾಫ ಮತ್ತು ಅಂಗನವಾಡಿ ನೌಕರರು, ಬಿಸಿ ಊಟದ ನೌಕರರು, ಪಂಚಾಯತ ನೌಕರರು, ಕಟ್ಟಡ ಕಾರ್ಮಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.