ಬೆಳಗಾವಿ: ತಾಲ್ಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈಚೆಗೆ ಕುರಾನ್ ಗ್ರಂಥ ಸುಟ್ಟುಹಾಕಿದ ಹಿನ್ನೆಲೆಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಹಾಗೂ ಮಸೀದಿಗಳಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಕೋರ್ಟ್ ಆವರಣ ಪಕ್ಕದಲ್ಲಿರುವ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಸೇರಿದ ಅಪಾರ ಸಂಖ್ಯೆಯ ಜನ, ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು.
‘ನಾರಾ ತಕ್ದೀರ್, ಅಲ್ಲಾಹು ಅಕ್ಬರ್’, ಹಿಂದಸ್ತಾನ್ ಜಿಂದಾಬಾದ್ ಎಂದು ನಿರಂತರ ಘೋಷಣೆ ಮೊಳಗಿಸಿದರು. ಮುಸ್ಲಿಂ ಧರ್ಮದ ಧ್ವಜಗಳನ್ನು ಎಲ್ಲೆಡೆ ಹಾರಾಡಿಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡಿದರು.
ಚನ್ನಮ್ಮ ವೃತ್ತದ ನಾಲ್ಕೂ ದಿಕ್ಕಿನಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ.
ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಬೆಂಬಲ ಸೂಚಿಸಿದರು. ಮಧ್ಯಾಹ್ನದ ನಮಾಜ್ ಮುಗಿಸಿದ ಬಳಿಕ ಮಸೀದಿ, ದರ್ಗಾಗಳಿಂದಲೇ ಜನ ನೇರವಾಗಿ ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಸೇರಿದರು.
ನಿಷೇಧಾಜ್ಞೆ ಜಾರಿ:
ಮುಂಜಾಗೃತಾ ಕ್ರಮವಾಗಿ ನಗರ ಪೊಲೀಸ್ ಕಮಿಷನರ್ ಅವರು ಸ್ಥಳದಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಪ್ರತಿಭಟನೆಗೆ ಅವಕಾಶವಿಲ್ಲ; ಶಾಂತಿಯುತವಾಗಿ ಮೆರವಣಿಗೆ ಮಾಡಲು ಮನವಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.
ಸುಮಾರು 3,000 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಬೆಳಿಗ್ಗೆಯೇ ಜಿಲ್ಲೆಯ ವಿವಿಧೆಡೆಯಿಂದ ಬಂದ ಪೊಲೀಸರು ರಾಣಿ ಚನ್ನಮ್ಮ ವೃತ್ತದಲ್ಲಿ ಡ್ರಿಲ್ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.