ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದ ಹೊರವಲಯದಲ್ಲಿ ಬರುವ ಹೊಸ ರಸ್ತೆಯ ಬಳಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ಕಳೆದ ವರ್ಷ ಲೋಕೋಪಯೋಗಿ ಇಲಾಖೆಯಿಂದ ₹ 20 ಲಕ್ಷ ವೆಚ್ಚದಲ್ಲಿ ಆಗಿರುವ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೀಗಾಗಿ ಈ ರಸ್ತೆಯ ಮೇಲೆ ಹರಿಯುವ ಮಳೆ ನೀರು ಗಟಾರಕ್ಕೆ ಹೋಗದೆ ಮನೆಗೆ ನುಗ್ಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.
‘ಈ ಬಗ್ಗೆ ಇಲ್ಲಿಯ ಮುಸ್ಲಿಂ ಸಮುದಾಯದವರು ಅನೇಕ ಬಾರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಈ ಬಗ್ಗೆ ಗಮನ ಹರಿಸಿಲ್ಲ’ ಎಂದು ದಡ್ಡಿ ಗ್ರಾಮ ಪಂಚಾಯಿತಿ ಸದಸ್ಯೆ ನಸೀಮಾ ಬುಡನವರ ಮತ್ತು ಅನೇಕ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
‘ಯಮಕನಮರಡಿ ಕ್ಷೇತ್ರದ ಶಾಸಕರು ಹಾಗೂ ಸಚಿವರು ಗುಣಮಟ್ಟದ ಕಾಮಗಾರಿಗೆ ಉತ್ತೇಜನ ನೀಡಲಾಗುವುದು ಎಂದು ಭಾಷಣದಲ್ಲಿ ಹೇಳುತ್ತಾರೆ. ಆದರೆ ಈ ರೀತಿ ಕಾಮಗಾರಿ ಮಾಡಿದರೆ ಹೇಗೆ? ಮನೆಗೆ ನೀರು ನುಗ್ಗಿದರೆ ನಾವು ಎಲ್ಲಿ ಹೋಗಬೇಕು’ ಎಂದು ಅಳಲು ತೋಡಿಕೊಂಡರು. ತಕ್ಷಣ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಮುನ್ನಾ ಬುಡ್ಡಣ್ಣವರ, ನಸುದ್ದೀನ ಮಲಿಕ್, ರಾಜು ಶೇಖ್, ಬುರಾನ್ ಮುಲ್ಲಾ, ನವ್ವುದ್ದೀನ ಮುಲ್ಲಾ, ಮುಬಾರಕ ಕಂದಗಾವೆ, ಅಬ್ಬುಲ ಜಾಶಿ, ರಾಮಚಂದ್ರ ಪಾಮನಾಯಿಕ, ಅಮೀನ ಉದ್ದೀನ ಶೇಖ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.