ADVERTISEMENT

ಚಿಕ್ಕೋಡಿ | ಮಹಾ ಮಳೆ: ಹೊಲಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:24 IST
Last Updated 19 ಜುಲೈ 2024, 15:24 IST
ಚಿಕ್ಕೋಡಿ ತಾಲ್ಲೂಕಿನಲ್ಲಿ ದೂಧಗಂಗಾ ನದಿಗೆ ಮಲಿಕವಾಡ– ದತ್ತವಾಡ ಸೇತುವೆಯು ಜಲಾವೃತಗೊಂಡಿದೆ
ಚಿಕ್ಕೋಡಿ ತಾಲ್ಲೂಕಿನಲ್ಲಿ ದೂಧಗಂಗಾ ನದಿಗೆ ಮಲಿಕವಾಡ– ದತ್ತವಾಡ ಸೇತುವೆಯು ಜಲಾವೃತಗೊಂಡಿದೆ   

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುರುವಾರ ಸ್ವಲ್ಪ ಬಿಡುವು ನೀಡಿದ್ದ ಮಳೆಯು ಶುಕ್ರವಾರ ಮತ್ತೆ ಅಬ್ಬರಿಸಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ಹಾಗೂ ಉಪನದಿಗಳ ನೀರಿನಲ್ಲಿ ಏರಿಕೆ ಕಂಡುಬಂದಿದೆ.

ಮಹಾರಾಷ್ಟ್ರದ ಕೊಯ್ನಾದಲ್ಲಿ 11.4 ಸೆ.ಮೀ, ವಾರಣಾದಲ್ಲಿ 5.5 ಸೆ.ಮೀ, ಕಾಳಮ್ಮವಾಡಿಯಲ್ಲಿ 7.3 ಸೆ.ಮೀ, ಮಹಾಬಳೇಶ್ವರದಲ್ಲಿ 13.1 ಸೆ.ಮೀ, ನವಜಾದಲ್ಲಿ 16.6 ಸೆ.ಮೀ, ರಾಧಾನಗರಿಯಲ್ಲಿ 16.3 ಸೆ.ಮೀ ಕೊಲ್ಹಾಪುರದಲ್ಲಿ 2.2 ಸೆ.ಮೀ ಮಳೆಯಾಗಿದೆ.

ದೂಧಗಂಗಾ ಮತ್ತು ವೇದಗಂಗಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಈ ಎರಡೂ ನದಿಗಳಲ್ಲಿ ನೀರಿನ ಹರಿವು ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ನಿಪ್ಪಾಣಿ ತಾಲ್ಲೂಕಿನಲ್ಲಿ ವೇದಗಂಗಾ ನದಿಗೆ ಕಟ್ಟಲಾದ ಜತ್ರಾಟ– ಭಿವಶಿ, ಅಕ್ಕೋಳ– ಸಿದ್ನಾಳ, ಬೋಜವಾಡಿ– ಕುನ್ನೂರು ಕಿರು ಸೇತುವೆಗಳು ಜಲಾವೃತಗೊಂಡಿವೆ.

ADVERTISEMENT

ದೂಧಗಂಗಾ ನದಿಯ ನಿಪ್ಪಾಣಿ ತಾಲ್ಲೂಕಿನ ಕಾರದಗಾ–ಭೋಜ, ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ–ದತ್ತವಾಡ ಸೇತುವೆಗಲು ಮುಳುಗಡೆಯಾಗಿವೆ. ಈ ಎಲ್ಲ ಸೇತುವೆಗಳ ಮೇಲೆ ಸಂಚಾರ ಸ್ಥಗಿತಗೊಂಡಿದೆ.

ತಾಲೂಕಿನ ಕಲ್ಲೋಳ–ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಯಿಂದ 46 ಸಾವಿರ ಕ್ಯುಸೆಕ್ ಹಾಗೂ ದೂಧಗಂಗಾ ನದಿಯಿಂದ 15 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗೆ ಕಲ್ಲೋಳ ಬಳಿಯ ಕೃಷ್ಣಾ-ದೂಧಗಂಗಾ ಸಂಗಮ ಸ್ಥಳದಲ್ಲಿ 61,130 ಕ್ಯುಸೆಕ್ ಹೊರ ಹರಿವು ಇದೆ.

ಅಲ್ಲಲ್ಲಿ ಹೊಲ ಗದ್ದೆಗಳಿಗೆ ನದಿ ನೀರು ನುಗ್ಗಿದೆ. ಕಬ್ಬು, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಯು ನೀರಿನಲ್ಲಿ ನಿಂತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.