ADVERTISEMENT

ನದಿ ನೀರಿನ ಮಟ್ಟ ನಿಧಾನಗತಿ ಏರಿಕೆ

ಕೃಷ್ಣಾ ನದಿಗೆ 16,540 ಕ್ಯೂಸೆಕ್ ಒಳ ಹರಿವು

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:15 IST
Last Updated 6 ಜುಲೈ 2022, 4:15 IST

ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳ ಉಗಮ ಸ್ಥಾನವಾಗಿರುವ ಮಹಾಬಲೇಶ್ವರ ಸೇರಿದಂತೆ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಹಾಗೂ ತಾಲ್ಲೂಕಿನ ನದಿ ಜಲಾನಯನ ಪ್ರದೇಶದಲ್ಲೂ ಕಳೆದ 24 ಗಂಟೆಗಳಿಂದ ವರುಣನ ಅಬ್ಬರ ಹೆಚ್ಚಿರುವ ಕಾರಣ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಕ್ರಮೇಣ ಏರಿಕೆ ಕಂಡು ಬರುತ್ತಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 9,500 ಕ್ಯೂಸೆಕ್ ಮತ್ತು ದೂಧ್‌ಗಂಗಾ ನದಿಯಿಂದ 7,040 ಕ್ಯೂಸೆಕ್ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 16,540 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಪ್ರವಾಹ ಭೀತಿ ಎದುರಾಗಿಲ್ಲ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನಲ್ಲಿ ದೂಧ್‌ಗಂಗಾ, ವೇದಗಂಗಾ ನದಿಗಳಿಗೆ ಅಡ್ಡಲಾಗಿರುವ ಯಾವುದೇ ಕಿರು ಸೇತುವೆಗಳೂ ಮಂಗಳವಾರ ಸಂಜೆವರೆಗೂ ಜಲಾವೃತಗೊಂಡಿರಲಿಲ್ಲ.

ಮಹಾರಾಷ್ಟ್ರದ ಘಟ್ಟ ಪ್ರದೇಶದ ಮಹಾಬಲೇಶ್ವರದಲ್ಲಿ 12.9 ಸೆ.ಮೀ., ನವಜಾದಲ್ಲಿ 11.8 ಸೆ.ಮೀ., ರಾಧಾನಗರಿಯಲ್ಲಿ 12.4 ಸೆ.ಮೀ., ಕಾಳಮ್ಮವಾಡಿಯಲ್ಲಿ 8 ಸೆ.ಮೀ. ವಾರಣಾದಲ್ಲಿ 8.5 ಸೆ.ಮೀ, ಕೊಲ್ಹಾಪುರದಲ್ಲಿ 3.1 ಸೆ.ಮೀ. ಮಳೆ ದಾಖಲಾಗಿದ್ದು, ಮಳೆ ಪ್ರಮಾಣ ಇದೇ ರೀತಿ ಮುಂದುವರೆದರೆ ತಾಲ್ಲೂಕಿನ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ.

ADVERTISEMENT

ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಕ್ರಮೇಣ ಏರಿಕೆ ದಾಖಲಾಗುತ್ತಿದ್ದು, ಕೃಷಿಕರು ನದಿ ದಂಡೆಗಳಲ್ಲಿ ಅಳವಡಿಸಿರುವ ನೀರಾವರಿ ಪಂಪಸೆಟ್ ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ, 'ತಾಲ್ಲೂಕು ಆಡಳಿತ ಸಂಭವನೀಯ ಪ್ರವಾಹವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.