
ಅಶೋಕ ಚಂದರಗಿ, ರಾಜಶ್ರಿ ಯಾದವ (ಹಲಗೇಕರ)
ಬೆಳಗಾವಿ: ‘ಕನ್ನಡ ವಿರೋಧಿ ಧೋರಣೆ ಹೊಂದಿರುವ ಇಲ್ಲಿನ ಮರಾಠ ಮಂಡಳ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ನಾಗರಾಜ ಯಾದವ (ಹಲಗೇಕರ) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಅತ್ಯಂತ ಖಂಡನೀಯ. ಈ ಪ್ರಶಸ್ತಿಯ ಗೌರವ ಉಳಿಸಿಕೊಳ್ಳಲು ಸರ್ಕಾರವು ಅವರ ಪ್ರಶಸ್ತಿ ತಡೆಹಿಡಿಯಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆದ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ.ಪಾಟೀಲ ಅವರಿಗೆ ಪತ್ರ ಬರೆದಿರುವ ಅವರು, ‘ಮರಾಠ ಮಂಡಳ ಶಿಕ್ಷಣ ಸಂಸ್ಥೆಯು ಕನ್ನಡ ನಾಡು– ನುಡಿ– ಗಡಿಯ ವಿಚಾರವಾಗಿ ಯಾವಾಗಲೂ ನಕಾರಾತ್ಮಕ ನಿಲುವು ತಾಳುತ್ತ ಬಂದಿದೆ. ಸಂಸ್ಥೆಯಲ್ಲಿ ಕನ್ನಡ ಫಲಕ ಬಳಸುವುದೇ ಇಲ್ಲ. ಕನ್ನಡ ರಾಜ್ಯೋತ್ಸವ ಆಚರಿಸದೇ, ಧಿಕ್ಕರಿಸುತ್ತ ಬಂದಿದೆ. ಇಂಥ ಸಂಸ್ಥೆಯ ಅಧ್ಯಕ್ಷೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ತೀರ ಅವಮಾನಕರ. ಇಡೀ ಪ್ರಶಸ್ತಿಗೆ ಕಳಂಕ ತರುವ ವಿಷಯವಾಗಿದೆ. ಈ ಬಗ್ಗೆ ಗಡಿಯಲ್ಲಿ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ’ ಎಂದೂ ತಿಳಿಸಿದ್ದಾರೆ.
‘ನಾಗರಾಜ ಯಾದವ ಅವರು ವಿಧಾನ ಪರಿಷತ್ ಸದಸ್ಯರಾದ ಕಾರಣಕ್ಕೆ ಅವರ ಪತ್ನಿಗೆ ಪ್ರಶಸ್ತಿ ಕೊಡಲಾಗಿದೆ ಎಂಬ ಭಾವನೆ ಮೂಡಿದೆ. ಅಲ್ಲದೇ, ಈ ಪ್ರಶಸ್ತಿಗೆ 60 ವರ್ಷ ವಯಸ್ಸು ಮೀರಬೇಕು ಎಂಬ ನಿಯಮವನ್ನೂ ರಾಜಶ್ರೀ ಅವರ ವಿಚಾರದಲ್ಲಿ ಅಲ್ಲಗಳೆಯಲಾಗಿದೆ. ಪ್ರಶಸ್ತಿ ತಡೆಹಿಡಿದು ಸರ್ಕಾರ ತನ್ನ ಮಾನ– ಮರಿಯಾದೆ ಉಳಿಸಿಕೊಳ್ಳಬೇಕು’ ಎಂದೂ ಅವರು ಖಾರವಾಗಿ ಬರೆದಿದ್ದಾರೆ.
‘ಕನ್ನಡ ನಾಡು– ನುಡಿಗೆ, ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ ಹಲವು ಮಹನೀಯರು ಜಿಲ್ಲೆಯಲ್ಲಿದ್ದಾರೆ. ಬಿ.ಎಸ್.ಗವಿಮಠ, ಬಸವರಾಜ ಜಗಜಂಪಿ, ಎಲ್.ಎಸ್.ಶಾಸ್ತ್ರಿ ಅವರು ಕನಿಷ್ಠ 80 ವರ್ಷ ದಾಟಿದವರಿದ್ದಾರೆ. ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಕುಲಕರ್ಣಿ, ಸಾಹಿತಿ ಎಚ್.ಬಿ.ಕೋಲಕಾರ, ನಾಟಕಕಾರ ಡಿ.ಎಸ್.ಚೌಗಲೆ, ಪ್ರೊ.ವೈ.ಬಿ.ಹಿಮ್ಮಡಿ ಮುಂತಾದ ಹಿರಿಯ ಸಾಹಿತಿಗಳು, ಹೋರಾಟಗಾರರೂ ಇದ್ದಾರೆ. ಇವರನ್ನೆಲ್ಲ ಕಡೆಗಣಿಸಿದ್ದು ಸರಿಯಲ್ಲ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.