ರಾಮದುರ್ಗ: ತಾಲ್ಲೂಕಿನ ಕುನ್ನಾಳ ಗ್ರಾಮದ ಮಾರುತೇಶ್ವರ ಜಾತ್ರೆ ಪ್ರಯುಕ್ತ ನಡೆದ ಓಕುಳಿ ಆಚರಣೆಗೆ ಬಂದಿದ್ದ ಪರಿಶಿಷ್ಟ ಮಹಿಳೆ ಮೇಲೆ ನೀರು ಎರಚಿದ್ದನ್ನು ಪ್ರಶ್ನಿಸಿದವರ ಮೇಲೆ ಸಾಮೂಹಿಕವಾಗಿ ಹಲ್ಲೆ ಮಾಡಿದ ಘಟನೆ ಸೋಮವಾರ ನಡೆದಿದ್ದು, ಮಂಗಳವಾರ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯಲ್ಲಿ ಕುನ್ನಾಳದ ಲಕ್ಷ್ಮಣ ಮಾದರ ತಲೆಗೆ ಪೆಟ್ಟಾಗಿದ್ದು, ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೇಣುಕಾ ಮಾದರ, ಸುನಂದಾ ಮಾದರ, ಸುಧಾ ಮಾದರ ಅವರಿಗೆ ಗಾಯಗೊಂಡಿದ್ದಾರೆ.
‘ಕುನ್ನಾಳದಲ್ಲಿ ಮೇ 10ರಿಂದ ಮೂರು ದಿನ ಮಾರುತೇಶ್ವರ ಜಾತ್ರೆ ನಡೆಯಿತು. ಸೋಮವಾರ ಓಕುಳಿ ಆಚರಣೆ ವೇಳೆ ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಗೆ ಕೆಲವರು ನೀರು ಎರಚಿದರು. ಅದನ್ನು ಪ್ರಶ್ನಿಸಿದ ಮಾದರ ಸಮಾಜದ ಯುವಕನ ಮೇಲೆ ಗುಂಪೊಂದು ಹಲ್ಲೆ ಮಾಡಿತು. ಇದರಲ್ಲಿ ಒಬ್ಬರು ಲಿಂಗಾಯತ, ಒಬ್ಬರು ಕುರುಬ ಹಾಗೂ ನಾಲ್ವರು ರೆಡ್ಡಿ ಸಮುದಾಯದವರು ಇದ್ದಾರೆ. ಘರ್ಷಣೆಯಲ್ಲಿ ಒಬ್ಬರು ಕಬ್ಬಿಣದ ಸರಳಿನಿಂದ ಯುವಕನ ತಲೆಗೆ ಹೊಡೆದರು. ನಂತರ ಎರಡೂ ಗುಂಪಿನ ಮಧ್ಯೆ ಮಾರಾಮಾರಿ ನಡೆಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ಮಾಡಿದ ಆರೋಪಿಗಳಾದ ಯೋಗೇಶ ಮೂರ್ತೆಪ್ಪನವರ, ಲಕ್ಷ್ಮಣ ಜೀರಗಾಳ, ವೆಂಕಟೇಶ ಕರಿಗನ್ನವರ, ವೆಂಕಟೇಶ ಕುರಿ, ಬಸವರಾಜ ಉದಪುಡಿ ಮತ್ತು ಸಾಗರ ಕಬ್ಬೂರ ವಿರುದ್ಧ ದೂರು ದಾಖಲಾಗಿದೆ. ಡಿಎಸ್‌ಪಿ ಚಿದಂಬರ ಮಡಿವಾಳರ, ಸಿಪಿಐ ವಿನಾಯಕ ಬಡಿಗೇರ ಸ್ಥಳಕ್ಕೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.