
ಅಥಣಿ: ‘ದಕ್ಷಿಣ ಕಾಶಿ’ ಖ್ಯಾತಿಯ ತಾಲ್ಲೂಕಿನ ರಾಮತೀರ್ಥ ಕ್ಷೇತ್ರದಲ್ಲಿ ಈಗ ಮಹಾಶಿವರಾತ್ರಿ ಸಂಭ್ರಮ ಮನೆಮಾಡಿದೆ. ಶಿವನಾಮ ಸ್ಮರಣೆ, ಉಪಾಸನೆಗೆ ಭಕ್ತರು ಸಜ್ಜಾಗಿದ್ದಾರೆ.
ಮಹಾಶಿವರಾತ್ರಿ ಪ್ರಯುಕ್ತ ಫೆ.15ರಿಂದ 19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರದ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ.
ಬಂಡೆಗಲ್ಲು ಕೊರೆದು ದೇವಸ್ಥಾನ ನಿರ್ಮಿಸಿರುವುದನ್ನು ಗಮನಿಸಿದರೆ, ಇದು ದ್ರಾವಿಡರ ಕಾಲದ ಶಿಲ್ಪಕಲೆ ಆಗಿರಬಹುದು ಎಂಬುದು ಕೆಲವರ ಅಭಿಪ್ರಾಯ.
ಗರ್ಭಗೃಹ, ನವರಂಗ ಹಾಗೂ ಸುಖನಾಸಿ ಎಂಬ ಮೂರು ಗುಡಿಗಳ ಮುಂದೆ ಇರುವ ನಂದಿ ವಿಗ್ರಹ ಒಂದೇ. ನವರಂಗದ ಚಾವಣಿಯಲ್ಲಿ ವಾಸ್ತುಶಿಲ್ಪಿಗಳ ಕಲಾನೈಪುಣ್ಯತೆ ಕಣ್ಮನಸೆಳೆಯುತ್ತದೆ. ದೇವಾಲಯದ ಮುಂಭಾಗದ ಒಂದು ಬದಿಯಲ್ಲಿರುವ ಒಂಬತ್ತು ಅಡಿಗಳ ದೀಪಸ್ತಂಭ ನಯನ ಮನೋಹರವಾಗಿದೆ.
11 ಮತ್ತು 12ನೇ ಶತಮಾನದ ಅನೇಕ ಶಾಸನಗಳು, ಕಲಾಕೃತಿಗಳನ್ನು ಇದು ಒಳಗೊಂಡಿದೆ. ಈ ದೇವಸ್ಥಾನದ ಬಗ್ಗೆ ಪುರಾಣದಲ್ಲಿ ಸಹ ಉಲ್ಲೇಖವಿದೆ.
ದೇವಸ್ಥಾನದ ಹಿಂದೆ ಪಾರ್ವತಿ ದೇವಸ್ಥಾನವಿದೆ. ಏಕಶಿಲೆಯನ್ನು ಒಡೆದು ಪ್ರಾಂಗಣ ಮಾಡಿ, ಈ ದೇವಸ್ಥಾನ ನಿರ್ಮಿಸಲಾಗಿದೆ. ನವರಂಗದಲ್ಲಿ ನಿಂತಾಗ ದಕ್ಷಿಣ ಮತ್ತು ಉತ್ತರಕ್ಕೂ ಒಂದೊಂದು ಲಿಂಗವಿರುವ ಗರ್ಭಗೃಹ ನೋಡಬಹುದು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಮೂರು ರೂಪದ ವಿಗ್ರಹಗಳು ಲಿಂಗದ ರೂಪದಲ್ಲಿ ಇರುವುದು ವಿಶೇಷ.
ಶತಮಾನಗಳ ಇತಿಹಾಸ ಹೊಂದಿರುವ ರಾಮತೀರ್ಥ ಗ್ರಾಮದಲ್ಲಿ ವೈಭವದಿಂದ ಶಿವರಾತ್ರಿ ಉತ್ಸವ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.