ADVERTISEMENT

ರಾಮದುರ್ಗ | ನೆರೆ ಸಂತ್ರಸ್ತರಿಗೆ ‘ತೆರವು’ ತಂದಿಟ್ಟ ಸಂಕಟ

ಇಮಾಮ್‌ಹುಸೇನ್‌ ಗೂಡುನವರ
Published 18 ಫೆಬ್ರುವರಿ 2026, 7:31 IST
Last Updated 18 ಫೆಬ್ರುವರಿ 2026, 7:31 IST
ರಾಮದುರ್ಗ ತಾಲ್ಲೂಕಿನ ಶಿವಪೇಟೆಯ ತೋಟಗಾರಿಕೆ ಕ್ಷೇತ್ರದಲ್ಲಿನ ತಗಡಿನ ಶೆಡ್‌ನಲ್ಲಿ ವಾಸವಿರುವ ಸಂತ್ರಸ್ತರು  ಪ್ರಜಾವಾಣಿ ಚಿತ್ರ
ರಾಮದುರ್ಗ ತಾಲ್ಲೂಕಿನ ಶಿವಪೇಟೆಯ ತೋಟಗಾರಿಕೆ ಕ್ಷೇತ್ರದಲ್ಲಿನ ತಗಡಿನ ಶೆಡ್‌ನಲ್ಲಿ ವಾಸವಿರುವ ಸಂತ್ರಸ್ತರು  ಪ್ರಜಾವಾಣಿ ಚಿತ್ರ   

ಅವರಾದಿ (ಬೆಳಗಾವಿ ಜಿಲ್ಲೆ): ರಾಮದುರ್ಗ ತಾಲ್ಲೂಕಿನ ಶಿವಪೇಟೆಯ ತೋಟಗಾರಿಕೆ ಕ್ಷೇತ್ರದಲ್ಲಿ ತಾತ್ಕಾಲಿಕ ತಗಡಿನ ಶೆಡ್‌ಗಳಲ್ಲಿ ಐದು ವರ್ಷಗಳಿಂದ ವಾಸವಿರುವ ನೆರೆ ಸಂತ್ರಸ್ತರಿಗೆ ಈಗ ತೋಟಗಾರಿಕೆ ಇಲಾಖೆ ಕೈಗೊಳ್ಳಲಿರುವ ‘ತೆರವು’ ಪ್ರಕ್ರಿಯೆ ಸಂಕಷ್ಟ ತಂದಿದೆ. ಅತ್ತ ಸ್ವಂತ ಮನೆಗೆ ಹೋಗಲು, ಕಾಮಗಾರಿ ಪೂರ್ಣಗೊಂಡಿಲ್ಲ. ಇತ್ತ ಶೆಡ್‌ನಲ್ಲಿ ಇರಲು ತೋಟಗಾರಿಕೆ ಇಲಾಖೆ ಬಿಡುತ್ತಿಲ್ಲ.

2019ರಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ರಾಮದುರ್ಗ ತಾಲ್ಲೂಕಿನ ಅವರಾದಿ, ಹಂಪಿಹೊಳಿಯಲ್ಲಿ
ಹಲವು ಮನೆಗಳು ಬಿದ್ದಿದ್ದವು. ಮನೆ ಕಳೆದು ಕೊಂಡು ಅತಂತ್ರರಾಗಿದ್ದ
ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳನ್ನು 2020ರ ಸೆಪ್ಟೆಂಬರ್‌ನಲ್ಲಿ ನಿರ್ಮಿಸಿ ಕೊಡಲಾಗಿತ್ತು.

ಸಂತ್ರಸ್ತರಿಗೆ ಮನೆ ನಿರ್ಮಿಸಲು ಸರ್ಕಾರ ₹5 ಲಕ್ಷ ಪರಿಹಾರ ಘೋಷಿಸಿತ್ತು. ಪೂರ್ತಿ ಪರಿಹಾರ ಪಡೆದವರು ಮನೆ ನಿರ್ಮಿಸಿಕೊಂಡಿದ್ದು, ಶೆಡ್‌ ತೆರವು ಗೊಳಿಸಿದ್ದಾರೆ. ಪೂರ್ತಿ ಪರಿಹಾರ ಸಿಗದವರು ಶೆಡ್‌ನಲ್ಲೇ ಉಳಿದಿದ್ದಾರೆ.

ADVERTISEMENT

ಶೆಡ್‌ ತೆರವಿಗೆ ಪತ್ರ: ಈ ಮಧ್ಯೆ, ಶೆಡ್‌ ತೆರವಿಗೆ ತೋಟಗಾರಿಕೆ ಇಲಾಖೆಯವರು ಬೈಲಹೊಂಗಲ ಉಪವಿಭಾಗಾಧಿಕಾರಿ ಮತ್ತು ರಾಮದುರ್ಗ ತಹಶೀಲ್ದಾರರಿಗೆ ಪತ್ರ ಬರೆದಿದ್ದಾರೆ. ಸಂತ್ರಸ್ತರಿಗೂ ಒತ್ತಾಯಿಸುತ್ತಿದ್ದಾರೆ. 

‘ಶಿವಪೇಟೆಯ ತೋಟಗಾರಿಕೆ ಕ್ಷೇತ್ರದಲ್ಲಿ 13 ಎಕರೆ ಜಾಗವಿತ್ತು. ಅದರಲ್ಲಿ 1 ಎಕರೆಯಲ್ಲಿ 34 ತಗಡಿನ ಶೆಡ್‌ ಹಾಕಲಾಗಿತ್ತು. 20 ಶೆಡ್‌ಗಳು ಬಿದ್ದಿವೆ. ಉಳಿದ 14ರಲ್ಲಿ ಕೆಲವರಷ್ಟೇ ಸಂತ್ರಸ್ತರಿದ್ದಾರೆ. ನಮಗೆ ಜಾಗದ ಕೊರತೆ ಇದೆ. ಶೆಡ್‌ ತೆರವುಗೊಳಿಸಿದರೆ ಅಲ್ಲಿ ತೆಂಗಿನ ಸಸಿಗಳನ್ನು ಬೆಳೆಸುವ ಯೋಜನೆ ಇದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಗೂ ಶೆಡ್‌ನಲ್ಲಿ ಇರಲು ಮನಸ್ಸಿಲ್ಲ. ಪೂರ್ತಿ ಪರಿಹಾರ ಕೊಟ್ಟರೆ ನಮ್ಮ ಮನೆ ಕಾಮಗಾರಿ ಪೂರ್ಣಗೊಳಿಸಿ, ಅಲ್ಲಿಗೆ ಹೋಗುತ್ತೇವೆ’ ಎಂದು ಸಂತ್ರಸ್ತರಾದ ಫಾತಿಮಾ ಮುಲ್ಲಾ ಮತ್ತು ಮರಿಯವ್ವ ಮಾದರ ಹೇಳುತ್ತಾರೆ. 

‘ಅವರಾದಿ ಗ್ರಾಮ ಪಂಚಾಯಿತಿ ಕೆಲ ಸಂತ್ರಸ್ತರಿಗೆ ತಾಂತ್ರಿಕ ಕಾರಣದಿಂದ ಪೂರ್ತಿ ಪರಿಹಾರ ಸಿಕ್ಕಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ’ ಎಂದು ಅವರಾದಿ ಪಂಚಾಯಿತಿ ಪಿಡಿಒ ಬಿ.ಎಸ್‌.ಗುಡದನ್ನವರ ಹೇಳಿದರು.

ತಗಡಿನ ಶೆಡ್‌ ತೆರವಿಗೆ ತೋಟಗಾರಿಕೆ ಇಲಾಖೆಯವರು ಕೋರಿದ್ದಾರೆ. ಸಂತ್ರಸ್ತರಿಗೆ ಬರಬೇಕಿರುವ ಪೂರ್ತಿ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು.
– ಪ್ರಕಾಶ ಹೊಳೆಪ್ಪಗೋಳ, ತಹಶೀಲ್ದಾರ್‌, ರಾಮದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.