
ರಾಮದುರ್ಗ: ಸನಾತನ ಧರ್ಮ ಹಿಂದೂ ಸಮಾಜೋತ್ಸವದ ಅಂಗವಾಗಿ ಹಮ್ಮಿಕೊಂಡ ಶೋಭಾಯಾತ್ರೆಯು ರಾಮದುರ್ಗ ಪಟ್ಟಣದಲ್ಲಿ ಅತ್ಯಂತ ಆಕರ್ಷಣೀಯವಾಗಿ ಜರುಗಿತು.
ಪಟ್ಟಣದ ಯಾನಾಂ ಪೇಟೆಯ ಶಂಕರಲಿಂಗ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆ ನಾರಾಯಣ ಪೇಟೆ, ಪಾಂಡುರಂಗ ಟಾಕೀಜ್ ರಸ್ತೆ, ಆರಿಬೆಂಚಿ ಪೆಟ್ರೋಲ್ ಬಂಕ್, ಬಸವ ಮಾರ್ಗ, ಹುತಾತ್ಮ ಚೌಕ್, ಹಳೇ ಪೊಲೀಸ್ ಠಾಣೆ ರಸ್ತೆ, ಬಿ.ಸಿ. ದೇಸಾಯಿ ರಸ್ತೆ, ತೇರ ಬಜಾರ ಮೂಲಕ ಸಾಗಿ ಮುಖ್ಯ ವೇದಿಕೆಗೆ ತಲುಪಿತು.
ಶೋಭಾಯಾತ್ರೆಯಲ್ಲಿ ಕರಡಿ ಮಜಲು, ಡೊಳ್ಳು ಕುಣಿತ, ಮಹಿಳೆಯರ ಡೊಳ್ಳು ಮೇಳ, ಮಹಿಳೆಯರ ಭಜನೆ ಮೇಳಗಳು ದಾರಿಯುದ್ದಕ್ಕೂ ಭಕ್ತಿಯ ಪರಾಕಾಷ್ಠೆ ಮೆರೆದವು. 12ನೇ ಶತಮಾನದ ಶರಣರು, ಸ್ವಾತಂತ್ರ್ಯ ಕಹಳೆ ಮೊಳಗಿದ ಮಹನೀಯರ ಸ್ತಬ್ದ ಚಿತ್ರಗಳು, ಸಾಧು ಸಂತರ ವೇಷ ಧರಿಸಿದ ಮಕ್ಕಳ ರೂಪಕಗಳು ಶೋಭಾಯಾತ್ರೆಗೆ ಮೆರಗು ತಂದವು. ಬೃಹದಾಕಾರದ ಕಲಾ ಗೊಂಬೆಗಳು ಆಕರ್ಷಣೀಯವಾಗಿದ್ದವು.
ಮಹಿಳಾ ಸ್ವಯಂ ಸೇವಕರು, ಕಾರ್ಯಕರ್ತ ಮಹಿಳೆಯರು ಕೇಸರಿ ಬಣ್ಣದ ಸೀರೆಗಳನ್ನು ಧರಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು, ಯುವಕರು ಬಿಳಿ ಜುಬ್ಬಾ, ಕೇಸರಿ ಶಾಲೂ ಧರಿಸಿ ಸಂಭ್ರಮಿಸಿದರು. ಸ್ತಬ್ದ ಚಿತ್ರಗಳು, ಬಾರತ ಮಾತೆಯ ಭಾವಚಿತ್ರಗಳು ಶೋಭಾಯಾತ್ರೆಯಲ್ಲಿ ಮಿಂಚಿದವು.
ಶೋಭಾಯಾತ್ರೆ ಆಗಮಿಸುವ ದಾರಿಯಲ್ಲಿ ಆಯಾ ಭಾಗದ ಮಹಿಳೆಯರು ದಾರಿಯುದ್ದಕ್ಕೂ ರಂಗೋಲಿ ಬಿಡಿಸಿ ಭಾರತ ಮಾತ್ರೆಯ ಭಾವಚಿತ್ರ ಇರಿಸಿ ಪೂಜಿಸಿದ್ದರು. ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ಯುವಕರು, ಮಹಿಳೆಯರು, ಮಕ್ಕಳ ಮೇಲೆ ಪುಷ್ಪವೃಷ್ಠಿ ಮಾಡಲಾಯಿತು. ದಾರಿಯುದ್ದಕ್ಕೂ ವಿದ್ಯುತ್ ಕಂಬ, ಮರಗಳಿಗೆ ಕೇಸರಿ ಧ್ವಜಗಳನ್ನು ಅಳವಡಿಸಿ ಶೃಂಗರಿಸಲಾಗಿತ್ತು. ಒಟ್ಟಿನಲ್ಲಿ ಪಟ್ಟಣ ಕೆಲವು ಭಾಗಗಳು ಕೇಸರಿಮಯವಾಗಿ ಕಂಗೊಳಿಸಿದವು.
ಹಿಂದೂ ಸಮಾಜೋತ್ಸವದ ಪ್ರಮುಖರಾದ ಮಲ್ಲಣ್ಣ ಯಾದವಾಡ, ವೆಂಕಟೇಶ ಹಿರೇರಡ್ಡಿ, ಶಂಕ್ರಣ್ಣ ಮುರುಡಿ, ಮಲ್ಲಿಕಾರ್ಜುನ ಭಾವಿಕಟ್ಟಿ, ಬಸವರಾಜ ಮಾದನ್ನವರ, ಗಂಗಾಧರ ಭೋಸಲೆ, ದತ್ತಾ ನಾಯಕ, ರಂಗನಾಥ ಹೂಗಾರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.