
ರಾಮದುರ್ಗ: ರಾಜಮನೆತನದ ವಸ್ತುಗಳು ಹಾಗೂ ರಾಮದುರ್ಗ ದುರಂತದಲ್ಲಿ ಗಲ್ಲಿಗೇರಿದ ಹೋರಾಟಗಾರರನ್ನು ನೆನಪಿಸುವ ಉದ್ದೇಶದಿಂದ ಸ್ಥಾಪಿಸಿರುವ ಇಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯ(ಮ್ಯೂಸಿಯಂ), ಇಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಮೂತ್ರಾಲಯವಾಗಿ ಮಾರ್ಪಟ್ಟಿದೆ!
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಸ್.ಎಂ. ಜಾಮದಾರ 2006ರಲ್ಲಿ ರಾಜ್ಯ ಸರ್ಕಾರದಿಂದ ₹60 ಲಕ್ಷ ಅನುದಾನ ಬಿಡುಗಡೆಗೊಳಿಸಿ, ಆಕರ್ಷಕ ಮ್ಯೂಸಿಯಂ ನಿರ್ಮಿಸಿದ್ದರು. ಆದರೆ, ಈಗ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಅದನ್ನು ಬಳಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ‘ಕತ್ತಲಾಗುತ್ತಿದ್ದಂತೆ ಇಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ’ ಎಂಬ ಆರೋಪ ಕೇಳಿಬರುತ್ತಿವೆ.
ಈ ಹಿಂದೆ ರಾಮದುರ್ಗದ ಸಂಸ್ಥಾನಿಕರ ಕಾಲದ ಕೈದಿಗಳನ್ನು ಬಂಧಿಸಿ ಇರಿಸಲು ಜೈಲು ನಿರ್ಮಿಸಲಾಗಿತ್ತು. ಎಸ್.ಎಂ.ಜಾಮದಾರ ವಿಶೇಷ ಕಾಳಜಿ ವಹಿಸಿ ಜೈಲಿನ ಕಟ್ಟಡ ನವೀಕರಣಗೊಳಿಸಿ, ಮ್ಯೂಸಿಯಂ ನಿರ್ಮಾಣಕ್ಕೆ ಶ್ರಮಿಸಿದ್ದರು.
ಇಲ್ಲಿ ರಾಮದುರ್ಗದ ರಾಜಮನೆತನದ ಪಳೆಯುಳಿಕೆಗಳು, ಆರ್ಟ್ ಗ್ಯಾಲರಿ, ಬಯಲು ರಂಗಮಂದಿರ ನಿರ್ಮಿಸಲು ಯೋಜಿಸಿದ್ದರು. ಹಾಳಾಗಿದ್ದ ಬಂಧಿಖಾನೆ ಕೊಠಡಿಗಳನ್ನು ಸಂಪೂರ್ಣ ನವೀಕರಿಸಿ ಅಂದ ಹೆಚ್ಚಿಸಿದ್ದರು. ಸುತ್ತಲಿನ ಗೋಡೆಗೂ ಹೈಟೆಕ್ ಸ್ಪರ್ಶ ನೀಡಿ, ಜನರನ್ನು ಸೆಳೆದಿದ್ದರು. 2006–07ರಲ್ಲಿ ಆಗಿನ ಜನಪ್ರತಿನಿಧಿಗಳು ಇದನ್ನು ಉದ್ಘಾಟಿಸಿದ್ದರು.
ಅದಾದ ನಂತರ ಸುಧಾರಣೆ ಕಾಣದ ಮ್ಯೂಸಿಯಂ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಮ್ಯೂಸಿಯಂ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು, ವಿಷಜಂತುಗಳ ಹಾವಳಿ ಜೋರಾಗಿದೆ. ಕೆಲವರು ಮ್ಯೂಸಿಯಂನ ಬಾಗಿಲು ಮುರಿದು ಹಾಕಿದ್ದಾರೆ.
ಮ್ಯೂಸಿಯಂ ದುರಸ್ತಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರ 2012ರಲ್ಲಿ ₹5 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ನಂತರ ಬಿಡಿಗಾಸು ಅನುದಾನವೂ ಬಂದಿಲ್ಲ. ನಿರ್ವಹಣೆಗೆ ಅನುದಾನ ಬೇಕೆಂದು ಅಧಿಕಾರಿಗಳೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ.
ರಾಮದುರ್ಗದಲ್ಲಿನ ಮ್ಯೂಸಿಯಂ ಅಭಿವೃದ್ಧಿಗೆ ಅಧಿಕಾರಿಗಳು ಕಿಂಚತ್ತೂ ಕಾಳಜಿ ವಹಿಸುತ್ತಿಲ್ಲ. ಉಪವಿಭಾಗಾಧಿಕಾರಿಗೆ ಇಲ್ಲೊಂದು ಮ್ಯೂಸಿಯಂ ಇದೆ ಎಂಬ ಮಾಹಿತಿಯೂ ಇಲ್ಲಪಾಂಡುರಂಗ ಜಟಗನ್ನವರ ಮ್ಯೂಸಿಯಂ ಉಪಸಮಿತಿ ಸದಸ್ಯ
ಶೀಘ್ರವೇ ಉಪಸಮಿತಿ ಸಭೆ ಕರೆದು ಮ್ಯೂಸಿಯಂನಲ್ಲಿ ಸ್ವಚ್ಛತೆ ಕಾರ್ಯ ಮಾಡಲಾಗುವುದು. ಅದರ ಸದ್ಬಳಕೆಗೆ ಒತ್ತು ನೀಡಲಾಗುವುದುಪ್ರಕಾಶ ಹೊಳೆಪ್ಪಗೋಳ ರಾಮದುರ್ಗ ತಹಶೀಲ್ದಾರ್
ಸಭೆಗಳೂ ನಡೆಯುತ್ತಿಲ್ಲ ರಾಮದುರ್ಗದ ದುರಂತದಲ್ಲಿ ಮಡಿದವರ ಚರಿತ್ರೆಯನ್ನು ಸಂಗ್ರಹಿಸಿಡಲು ಆಗಿನ ಕಾಲದಲ್ಲಿದ್ದ ಹಿರಿಯರು ಜಾನಪದ ರಂಗದ ದಿಗ್ಗಜರು ಹಾಗೂ ಸಾಂಸ್ಕೃತಿಕ ಪರಂಪರೆಯ ಅನುಭವ ಹೊಂದಿರುವ ಅನೇಕರನ್ನು ಒಟ್ಟುಗೂಡಿಸಿ ರಚಿಸಿದ ‘ಉಪಸಮಿತಿ’ 2006ರಿಂದಲೇ ಅಸ್ತಿತ್ವದಲ್ಲಿದೆ. ಕಟ್ಟಡ ಕಾಮಗಾರಿ ನಡೆಯುವಾಗ ಆಗೊಮ್ಮೆ ಈಗೊಮ್ಮೆ ಉಪಸಮಿತಿ ಸಭೆ ನಡೆಯುತ್ತಿದ್ದವು. ಆದರೆ ಈಚಿನ ವರ್ಷಗಳಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಉಪಸಮಿತಿ ಸಭೆಗಳನ್ನು ನಡೆಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಉಪಸಮಿತಿ ಸದಸ್ಯರು ಅಲ್ಲಲ್ಲಿ ಲಭ್ಯವಿರುವ ಭಗ್ನ ಮೂರ್ತಿಗಳು ರಾಜಮನೆತನದ ಸಾಮಗ್ರಿಗಳನ್ನು ಸಂಗ್ರಹಿಸಿ ಮ್ಯೂಸಿಯಂ ಆವರಣದಲ್ಲಿ ಎಲ್ಲೆಂದರಲ್ಲಿ ಆವರಣದಲ್ಲಿ ಚೆಲ್ಲಾಡಿದ್ದಾರೆ. ತಾಲ್ಲೂಕಿನ ಬನ್ನೂರಿನಲ್ಲಿ ಉಪಸಮಿತಿಯು ಮ್ಯೂಸಿಯಂಗಾಗಿಯೇ ಹುಡುಕಿ ಇಟ್ಟಿದ್ದ ಪ್ರಾಚೀನ ಕಾಲದ ಕೆತ್ತನೆಯ ಮೂರ್ತಿಗಳು ರಸ್ತೆಬದಿ ಅನಾಥವಾಗಿ ಬಿದ್ದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.