ADVERTISEMENT

ಪ್ರವಾಹ ನಿರ್ವಹಣೆ: ಮಹಾರಾಷ್ಟ್ರದ ಸಚಿವರ ಜೊತೆ ರಮೇಶ ಜಾರಕಿಹೊಳಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 12:51 IST
Last Updated 8 ಆಗಸ್ಟ್ 2020, 12:51 IST
ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಇಚಲಕರಂಜಿ ಬಳಿ ಸಚಿವ ರಮೇಶ ಜಾರಕಿಹೊಳಿ  ಹಾಗೂ ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ ಅವರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು
ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಇಚಲಕರಂಜಿ ಬಳಿ ಸಚಿವ ರಮೇಶ ಜಾರಕಿಹೊಳಿ  ಹಾಗೂ ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ ಅವರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು   

ಚಿಕ್ಕೋಡಿ: ಪ್ರವಾಹ ಸ್ಥಿತಿ ಉದ್ಭವಿಸದಂತೆ ತಡೆಗಟ್ಟುವುದು, ಜಲಾಶಯಗಳಿಂದ ನೀರು ಬಿಡುಗಡೆ, ತುರ್ತು ಸಂದರ್ಭಗಳಲ್ಲಿ ನದಿ ತೀರದ ಗ್ರಾಮಗಳ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶನಿವಾರ ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಸಚಿವ ರಾಜೇಂದ್ರ ಪಾಟೀಲ ಯಡ್ರಾವಕರ ಅವರ ಜತೆ ಚರ್ಚೆ ನಡೆಸಿದರು.

ಚಿಕ್ಕೋಡಿ ತಾಲ್ಲೂಕಿನ ವಿವಿಧೆಡೆ ಪ್ರವಾಹ ಸ್ಥಿತಿಯನ್ನು ರಮೇಶ ಜಾರಕಿಹೊಳಿ ಪರಿಶೀಲಿಸುತ್ತಿದ್ದ ವೇಳೆ ಸಮೀಪದಲ್ಲಿ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ಬಳಿಯ ಪಂಚಗಂಗಾ ನದಿ ಸೇತುವೆ ಮೇಲೆರಾಜೇಂದ್ರ ಪಾಟೀಲ ಅವರು ಕೂಡ ಪ್ರವಾಹ ಸ್ಥಿತಿ ಪರಿಶೀಲಿಸುತ್ತಿದ್ದಾಗ ಭೇಟಿಯಾದರು.

‘ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಬಹಳಷ್ಟು ಹಾನಿ ಉಂಟಾಗಿತ್ತು. ಆದ್ದರಿಂದ ಈ ಬಾರಿ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಮಳೆಯ ಪ್ರಮಾಣ, ಜಲಾಶಯಗಳ ಮಟ್ಟ ಮತ್ತು ನೀರು ಬಿಡುಗಡೆಗೆ ಕುರಿತು ಎರಡೂ ರಾಜ್ಯಗಳು ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಪ್ರವಾಹ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಹುದು’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಸ್ಪಂದಿಸಿದ ರಾಜೇಂದ್ರ ಪಾಟೀಲ ಅವರು, ‘ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಸಚಿವರ ಜತೆ ಚರ್ಚಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.