
ಅಥಣಿ: ‘ಶಾಸಕ ಲಕ್ಷ್ಮಣ ಸವದಿ ಬಿಜೆಪಿಯಲ್ಲೇ ಇದ್ದಿದ್ದರೆ ದೊಡ್ಡ ನಾಯಕರಾಗುತ್ತಿದ್ದರು. ಆದರೆ, ಕಾಂಗ್ರೆಸ್ ಸೇರಿ ತಮ್ಮ ವ್ಯಕ್ತಿತ್ವ ಹಾಳು ಮಾಡಿಕೊಂಡರು. ಇನ್ಮುಂದೆ ಸವದಿ ಬಿಜೆಪಿ ಸೇರಲು ನಾವು ಆಸ್ಪದ ಕೊಡುವುದಿಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಇಲ್ಲಿ ನಡೆದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ನಾವು ಯಾವುದೋ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ ಸವದಿ ಅವರಿಗೆ ಲಾಭವಾಯಿತು. ಆದರೆ, ನಂತರ ಅವರು ಬಿಜೆಪಿಯನ್ನೇ ತೊರೆದಿದ್ದು ಒಳ್ಳೆಯದಾಯಿತು. ಇನ್ಮುಂದೆ ಸವದಿ ಬಿಜೆಪಿಗೆ ಬರುವುದಾದರೆ, ಎಲ್ಲಿ ತಡೆಯಬೇಕೋ ತಡೆಯುತ್ತೇವೆ’ ಎಂದರು.
‘ತಮಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುವ ಆಸೆ ಇಲ್ಲ ಎಂದು ಸವದಿ ಹೇಳುತ್ತಾರೆ. ಆದರೆ, ಅವಕಾಶ ಸಿಕ್ಕರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಅವರು ಹಿಂಜರಿಯುವುದಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದರೆ ಜಾರಕಿಹೊಳಿ ಕುಟುಂಬದವರ ಮನೆಗೆ ಬಂದು ಕಾಲಿಗೆ ಬೀಳುತ್ತಾರೆ’ ಎಂದು ಲೇವಡಿ ಮಾಡಿದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮುಖಂಡ ಗಜಾನನ ಮಂಗಸೂಳಿ ಅವರು, ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಶಶಿಕಾಂತ ಗುರೂಜಿ, ಸಿದ್ದಪ್ಪ ಮುದಕನ್ನವರ, ಸಿದ್ದಾರ್ಥ ಶಿಂಗೆ, ಎ.ಎ.ಹುದ್ದಾರ, ಗಿರೀಶ ಬುಟಾಳಿ ಇದ್ದರು.
ನಾನು ಯಾರಿಂದಲೂ ಬುದ್ಧಿ ಕಲಿಯಬೇಕಾದ ಅಗತ್ಯವಿಲ್ಲ: ಸವದಿ
ಅಥಣಿ: ‘ಅಥಣಿ ತಾಲ್ಲೂಕಿನ ಜನರು ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಸಿದ ಅಭ್ಯರ್ಥಿ ಸೋಲಿಸುವ ಮೂಲಕ ಅವರನ್ನು ತಿರಸ್ಕರಿಸಿದ್ದಾರೆ.
ರಮೇಶ ಅವರಿಗೆ ಅದರ ಅರಿವು ಇದ್ದಿದ್ದರೆ ಅಥಣಿ ತಾಲ್ಲೂಕಿನತ್ತ ಸುಳಿಯುತ್ತಿರಲಿಲ್ಲ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿದ ರಮೇಶ ಜಾರಕಿಹೊಳಿ ವಿರುದ್ಧ ಇಲ್ಲಿ ವಾಗ್ದಾಳಿ ನಡೆಸಿದ ಅವರು ‘2023ರ ವಿಧಾನಸಭೆ ಚುನಾವಣೆ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಾಲ್ಲೂಕಿನ ಜನರು ರಮೇಶ ಮತ್ತು ಅವರ ಬೆಂಬಲಿತ ಅಭ್ಯರ್ಥಿ ತಿರಸ್ಕರಿಸಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲೂ ತಿರಸ್ಕರಿಸಲಿದ್ದಾರೆ. ನಾನು ಯಾರಿಂದಲೂ ಬುದ್ಧಿ ಕಲಿಯಬೇಕಾದ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದರು. ‘ಜಾಣರಿಗೆ ಸೂಕ್ಷ್ಮತೆ ಅರ್ಥವಾಗುತ್ತದೆ. ಸೂಕ್ಷ್ಮತೆ ಹೊಂದಿರದವರಿಗೆ ಯಾವ ಅರಿವು ಇರುವುದಿಲ್ಲ. ಮನುಷ್ಯನಿಗೆ ಸಂಸ್ಕಾರ ಮುಖ್ಯ. ಸಂಸ್ಕಾರ ಹೊಂದಿರದವರು ಏನು ಬೇಕಾದರೂ ಮಾತನಾಡುತ್ತಾರೆ. ನನಗೆ ಹೆತ್ತವರು ಸಂಸ್ಕಾರ ಕೊಟ್ಟಿದ್ದಾರೆ. ಹಾಗಾಗಿ ಮೂರ್ಖರ ಮಾತಿಗೆ ಉತ್ತರಿಸಲಾರೆ’ ಎಂದು ಚಾಟಿ ಬೀಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.