ADVERTISEMENT

ಗೋಕಾಕ ಉಪಚುನಾವಣೆ; ರಮೇಶ ಎದುರು ಯಾರು?

ಶ್ರೀಕಾಂತ ಕಲ್ಲಮ್ಮನವರ
Published 1 ಡಿಸೆಂಬರ್ 2019, 11:26 IST
Last Updated 1 ಡಿಸೆಂಬರ್ 2019, 11:26 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಅವರಿಗೆ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡಿದ್ದು, ಉಪಚುನಾವಣೆಗೆ ಖದರ್‌ ಮೂಡಿದೆ. ಇವರ ಎದುರು ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಗೊಂದಲದಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಾಳೆಯವಿದ್ದರೆ, ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ, ಬೇಡವೊ ಎನ್ನುವುದರ ಬಗ್ಗೆ ಜೆಡಿಎಸ್‌ ಇನ್ನೂ ತೀರ್ಮಾನ ಕೈಗೊಂಡಿಲ್ಲ.

ವಾಲ್ಮೀಕಿ ಸಮುದಾಯದ ರಮೇಶ ಜಾರಕಿಹೊಳಿ ಹಲವು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ದುಡಿದಿದ್ದರು. ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ತೀವ್ರ ಬೇಸರಗೊಂಡಿದ್ದ ಅವರು, ರಾಜೀನಾಮೆ ನೀಡಿದ್ದರು. ರಾಜೀನಾಮೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಗೊಂಡ ನಂತರ ಅವರು ಗುರುವಾರ ಬೆಳಿಗ್ಗೆ ಬಿಜೆಪಿಗೆ ಸೇರ್ಪಡೆಯಾದರು. ಮಧ್ಯಾಹ್ನದ ವೇಳೆಗೆ ಪಕ್ಷವು ಗೋಕಾಕದಿಂದ ಸ್ಪರ್ಧಿಸಲು ಟಿಕೆಟ್‌ ಘೋಷಿಸಿದೆ.

ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರಿಗೆ ದೂರವಾಣಿ ಕರೆ ಮಾಡಿದ ರಮೇಶ, ಪ್ರಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.

ADVERTISEMENT

5 ಬಾರಿ ಶಾಸಕ:ಇದಕ್ಕೂ ಮುಂಚೆ ರಮೇಶ 5 ಸಲ ಶಾಸಕರಾಗಿದ್ದರು. 1999, 2004, 2008, 2013 ಹಾಗೂ 2018ರಲ್ಲಿ ಕಾಂಗ್ರೆಸ್‌ನಿಂದ ಜಯಗಳಿಸಿದ್ದರು. ಇದೇ ಮೊದಲ ಬಾರಿಗೆ ಪಕ್ಷ ತೊರೆದಿದ್ದಾರೆ.

ಕಾಂಗ್ರೆಸ್‌ ಅಸ್ಪಷ್ಟ:ರಮೇಶ ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಂತೆ ತಮ್ಮ ಇನ್ನೊಬ್ಬ ಸಹೋದರ ಲಖನ್‌ ಅವರನ್ನು ಗೋಕಾಕ ಕ್ಷೇತ್ರದಿಂದ ಕಣಕ್ಕಿಳಿಸಲು ಶಾಸಕ ಸತೀಶ ಜಾರಕಿಹೊಳಿ ಯೋಚಿಸಿದ್ದರು. ಲಖನ್‌ ಅವರನ್ನು ಕರೆದುಕೊಂಡು ಕಳೆದ ಮೂರು ತಿಂಗಳಿನಿಂದಲೂ ಕ್ಷೇತ್ರದಲ್ಲಿ ಸಂಚರಿಸಿದ್ದರು.

ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಗೋಕಾಕ ಜನರು ತತ್ತರಿಸಿದ್ದಾಗ, ಲಖನ್‌ ಅವರನ್ನು ಕರೆದುಕೊಂಡು ಗಲ್ಲಿ ಗಲ್ಲಿ ಸುತ್ತಿದರು. ಸಂತ್ರಸ್ತ ಜನರು ಹಾಗೂ ಲಖನ್‌ ನಡುವೆ ಸಂಪರ್ಕ ಕೊಂಡಿಯಂತೆ ಕಾರ್ಯನಿರ್ವಹಿಸಿದರು. ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಿದರು. ಲಖನ್‌ ಅವರಿಗೇ ಟಿಕೆಟ್‌ ನೀಡುವಂತೆ ಪಕ್ಷದ ಹೈಕಮಾಂಡ್‌ಗೆ ಕೋರಿಕೊಂಡಿದ್ದಾರೆ. ಇದೇ ಅಭಿಪ್ರಾಯವನ್ನು ಪಕ್ಷದ ಚಿಕ್ಕೋಡಿ ಜಿಲ್ಲಾ ಘಟಕವೂ ವ್ಯಕ್ತಪಡಿಸಿದೆ.

ಆದರೆ, ಪಕ್ಷದ ಇನ್ನೊಂದು ಗುಂಪು, ಜಾರಕಿಹೊಳಿ ಕುಟುಂಬದವರಿಗೆ ಟಿಕೆಟ್‌ ನೀಡಬಾರದೆಂದು ಹೈಕಮಾಂಡ್‌ ಮೊರೆ ಹೋಗಿದೆ. ಪಕ್ಷವು ಸಂಪೂರ್ಣವಾಗಿ ಕುಟುಂಬವೊಂದರ ಆಸ್ತಿಯಾಗಬಾರದೆಂದು ಕೋರಿದ್ದಾರೆ. ಈ ಗುಂಪಿನಲ್ಲಿ ಸ್ಥಳೀಯ ಮುಖಂಡರಿಗಿಂತ ರಾಜ್ಯ ಮಟ್ಟದ ಮುಖಂಡರೇ ಹೆಚ್ಚಾಗಿದ್ದಾರೆ. ಇದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

ಪೂಜಾರಿ ಪರ ಒಲವು?:ರಮೇಶ ವಿರುದ್ಧ ಕಳೆದ ಮೂರು ಚುನಾವಣೆಗಳಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಅಶೋಕ ಪೂಜಾರಿ ಪರ ಕೆಲವು ಕಾಂಗ್ರೆಸ್ಸಿಗರು ಒಲವು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿರುವ ಅವರನ್ನು ಕಾಂಗ್ರೆಸ್‌ಗೆ ಕರೆತಂದು, ಚುನಾವಣಾ ಕಣಕ್ಕಿಳಿಸಬೇಕು. ಅವರ ಬಗ್ಗೆ ಜನರಲ್ಲಿ ಇರುವ ಅನುಕಂಪದ ಅಲೆಯ ಲಾಭ ಪಡೆದುಕೊಳ್ಳಬೇಕು ಎನ್ನುವ ಲೆಕ್ಕಾಚಾರ ಹಾಕಿದ್ದಾರೆ.

ಅಶೋಕ ಅವರು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಅತಿ ಹೆಚ್ಚು ಲಿಂಗಾಯತ ಸಮುದಾಯದ ಮತದಾರರಿದ್ದು, ಇವರನ್ನು ಸೆಳೆಯುವ ಉದ್ದೇಶದಿಂದ ಅಶೋಕ ಅವರಿಗೆ ಟಿಕೆಟ್‌ ನೀಡಿದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶನಿವಾರ ನಿರ್ಧಾರ:‘ರಮೇಶ ಅವರಿಗೆ ಟಿಕೆಟ್‌ ನೀಡುವುದಾಗಿ ಬಿಜೆಪಿ ಘೋಷಿಸಿರುವುದರಿಂದ ನಾನು ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನು ಚರ್ಚಿಸಲು ಹಿತೈಷಿಗಳು ಹಾಗೂ ಬೆಂಬಲಿಗರ ಸಭೆಯನ್ನು ಶನಿವಾರ ಕರೆದಿದ್ದೇನೆ. ಸಭೆಯಲ್ಲಿ ಚರ್ಚಿಸಿದ ನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾಗಬೇಕಾ? ಬೇಡವಾ ಎನ್ನುವುದರ ಬಗ್ಗೆ ತೀರ್ಮಾನಿಸುತ್ತೇನೆ’ ಎಂದು ಅಶೋಕ ಪೂಜಾರಿ ತಿಳಿಸಿದ್ದಾರೆ.

ವರಿಷ್ಠರು ಇನ್ನೂ ತೀರ್ಮಾನಿಸಿಲ್ಲ:‘ಗೋಕಾಕ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೋ, ಬೇಡವೋ ಎನ್ನುವುದರ ಬಗ್ಗೆ ಪಕ್ಷದ ವರಿಷ್ಠರು ಇನ್ನೂ ತೀರ್ಮಾನ ಕೈಗೊಂಡಿಲ್ಲ. ಒಂದೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಬಹುದು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಹೇಳಿದರು.

ನಾಮಪತ್ರ ಸಲ್ಲಿಸಲು ಇದೇ 18 ಕೊನೆಯ ದಿನವಾಗಿದ್ದು, ಕಾಂಗ್ರೆಸ್‌ – ಜೆಡಿಎಸ್‌ ಅಭ್ಯರ್ಥಿ ಅಂತಿಮಗೊಂಡ ನಂತರ ಚುನಾವಣಾ ಕಣದ ಸ್ಪಷ್ಟ ಚಿತ್ರಣ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.