ಬೆಳಗಾವಿ: ‘ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ್ದಾರೆ’ ಎಂದು ಆರೋಪಿಸಿ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ನಗರದಲ್ಲಿ ಭಾನುವಾರ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆದಿತ್ತು. ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದ ರಮೇಶ ಕತ್ತಿ ಅವರು, ಜಾರಕಿಹೊಳಿ ಸಹೋದರರನ್ನು ಟೀಕಿಸುವ ಭರದಲ್ಲಿ ಇಡೀ ವಾಲ್ಮೀಕಿ ಸಮುದಾಯಕ್ಕೆ ಅವಾಚ್ಯ ಪದ ಬಳಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದನ್ನು ಆಧಾರವಾಗಿಟ್ಟುಕೊಂಡು ಸಮಾಜದ ಮುಖಂಡ ರಾಜಶೇಖರ ತಳವಾರ ಕ್ಯಾಂಪ್ ಠಾಣೆಗೆ ದೂರು ನೀಡಿದ್ದಾರೆ.
ಅಲ್ಲದೇ, ಸೋಮವಾರ (ಅ.20) ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.
‘ಬಿಡಿಸಿಸಿ ಚುನಾವಣೆಯಲ್ಲಿ ಗೆದ್ದ ಮೇಲೆ ಅಭಿಮಾನಿಗಳು ಡಾಲ್ಬಿ ಸಂಗೀತ ಹಚ್ಚಿ ಮೆರವಣಿಗೆ ಮಾಡಲು ಒತ್ತಾಯಿಸಿದರು. ಆಗ ನಾನು ಬ್ಯಾಡರೋ (ಬೇಡ) ಎಂದೆ. ಈ ಹೇಳಿಕೆ ತಿರುಚಿ ಜಾತಿ ನಿಂದನೆ ಎಂದು ವಿಡಿಯೊ ವೈರಲ್ ಮಾಡಿದ್ದಾರೆ’ ಎಂದು ಮಾಜಿ ಸಂಸದರೂ ಆದ ರಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.
ವಿಡಿಯೊ ಪ್ರತಿಕ್ರಿಯೆ ನೀಡಿರುವ ಅವರು, ‘ನನ್ನ ಗೆಲುವು ಸಹಿಸಲಾಗದವರು ಉದ್ದೇಶಪೂರ್ವಕ ವಾಲ್ಮೀಕಿ ಸಮುದಾಯದ ವಿರೋಧಿ ಎಂಬಂತೆ ಬಿಂಬಿಸಿದ್ದಾರೆ. ನಾನು ಯಾರನ್ನೂ ಉದ್ದೇಶಿಸಿ ಅಲ್ಲಿ ಮಾತನಾಡಿಲ್ಲ. ಅದಾಗಿಯೂ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.