ಬೆಳಗಾವಿ: ‘ಬೆಂಗಳೂರಿನ ರಂಗ ಶಂಕರವು ಬೆಳಗಾವಿಯಲ್ಲಿ ಇದೇ ತಿಂಗಳ 25ರಿಂದ 5 ದಿನಗಳ ಕಾಲ ನಾಟಕೋತ್ಸವ ಹಾಗೂ ನಾಲ್ಕು ದಿನಗಳ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿದೆ’ ಎಂದು ನಾಟಕೋತ್ಸವಕ್ಕೆ ಸಹಯೋಗ ನೀಡುತ್ತಿರುವ ರಂಗ ಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಲ್ಲಿನ ಕೋನವಾಳ ಗಲ್ಲಿಯಲ್ಲಿರುವ ಲೋಕಮಾನ್ಯ ರಂಗ ಮಂದಿರದಲ್ಲಿ ಪ್ರತಿ ದಿನ ಸಂಜೆ 6.30ಕ್ಕೆ ನಾಟಕಗಳು ಆರಂಭಗೊಳ್ಳಲಿವೆ. ಸಾರ್ವಜನಿಕರಿಗೆ ₹ 100 ಪ್ರವೇಶ ಧನವಿದೆ. ರಂಗಸಂಪದ ಸದಸ್ಯರಿಗೆ ಉಚಿತವಾಗಿದೆ’ ಎಂದರು.
ಡಿ.25– ಆಶೀ ಮತ್ತು ರೇಣು (ಚಿತ್ರನಾಟ್ಯ ಫೌಂಡೇಷನ್, ಬೆಂಗಳೂರು) , ಡಿ.26– ಮುದುಕ ಮತ್ತು ಸಮುದ್ರ (ರಂಗ ಶಂಕರ, ಬೆಂಗಳೂರು), ಡಿ.27– ಮತ್ತೊಬ್ಬ ಮಾಯಿ (ಆಟಮಾಟ, ಧಾರವಾಡ), ಡಿ.28– ಸೊನಾಟ (ಸಂಚಲನ, ಮೈಸೂರು) ಹಾಗೂ ಡಿ.29– ಕೊಳ್ಳಿ (ಮಂದಾರ, ಬೈಕಾಡಿ) ಪ್ರದರ್ಶನವಾಗಲಿವೆ.
‘ಡಿ.25ರಂದು ಸಂಜೆ 6ಕ್ಕೆ ನಾಟಕೋತ್ಸವಕ್ಕೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಚಾಲನೆ ನೀಡಲಿದ್ದಾರೆ. ರಂಗ ಶಂಕರದ ಅರುಂಧತಿ ನಾಗ, ನಿರ್ದೇಶಕ ಸುರೇಂದ್ರ ನಾಥ ಭಾಗವಹಿಸಲಿದ್ದಾರೆ. ಬೆಂಗಳೂರಿನ ಖ್ಯಾತ ನಾಟಕಕಾರ ಅನಿಷ್ ವಿಕ್ಟರ್ ರಂಗ ತರಬೇತಿ ಶಿಬಿರ ನಡೆಸಿಕೊಡಲಿದ್ದಾರೆ. ಉಚಿತವಾಗಿದ್ದು, 20ರಿಂದ 30 ವರ್ಷ ವಯಸ್ಸಿನ ರಂಗಾಸಕ್ತರು ತರಬೇತಿ ಪಡೆಯಬಹುದು. ಶಿಬಿರವು ಡಿ.26ರಿಂದ ನಾಲ್ಕು ದಿನಗಳ ಕಾಲ, ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ, ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.