ADVERTISEMENT

ರಾಣಿ ಚನ್ನಮ್ಮ ವಿ.ವಿಗೆ ಬೇಕಾಬಿಟ್ಟಿ ಮಾರ್ಗ: ರೈತರಿಗೆ ಸಂಕಷ್ಟ

ಹಳೆಯ ರಸ್ತೆ ಬಿಟ್ಟು ಬೇರೆಡೆ ಕಾಮಗಾರಿ, ಸ್ಥಳಕ್ಕೆ ಬಂದು ನೋಡದ ವಿ.ವಿ ಕುಲಪತಿ

ಸಂತೋಷ ಈ.ಚಿನಗುಡಿ
Published 15 ಜನವರಿ 2026, 4:07 IST
Last Updated 15 ಜನವರಿ 2026, 4:07 IST
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ರಾಣಿ ಚನ್ನಮ್ಮ ವಿ.ವಿಗೆ ನಿರ್ಮಿಸಲಾಗುತ್ತಿರುವ ರಸ್ತೆಯಿಂದ ಸಂಕಷ್ಟಕ್ಕೆ ಒಳಗಾದ ರೈತರು ಮತ್ತು ಹಾಳಾದ ಬೆಳೆ  ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ರಾಣಿ ಚನ್ನಮ್ಮ ವಿ.ವಿಗೆ ನಿರ್ಮಿಸಲಾಗುತ್ತಿರುವ ರಸ್ತೆಯಿಂದ ಸಂಕಷ್ಟಕ್ಕೆ ಒಳಗಾದ ರೈತರು ಮತ್ತು ಹಾಳಾದ ಬೆಳೆ  ಪ್ರಜಾವಾಣಿ ಚಿತ್ರ   

ಹಿರೇಬಾಗೇವಾಡಿ: ಗ್ರಾಮದ ಗುಡ್ಡದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ, ಇಲ್ಲಿಗೆ ತೆರಳುವ ರಸ್ತೆಯನ್ನು ವಿಶ್ವವಿದ್ಯಾಲಯದಿಂದ ಬೇಕಾಬಿಟ್ಟಿಯಾಗಿ ಒತ್ತುವರಿ ಮಾಡಲಾಗಿದೆ. ರೈತರ ಗಮನಕ್ಕೆ ತರದೇ ಅವರ ಹೊಲದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ದಿನವೂ ಭಾರಿ ವಾಹನಗಳ ಓಡಾಟದಿಂದ ಬೆಳೆ ಕೂಡ ದೂಳುಮಯವಾಗಿದ್ದು, ಚಿಂತೆಗೀಡು ಮಾಡಿದೆ ಎಂದು ರೈತರ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಭೂತರಾಮನಹಟ್ಟಿ ಬಳಿ ಸಣ್ಣ ಕಟ್ಟಡದಲ್ಲಿ ನಡೆಯುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ ಹೊರವಲಯದ ಗುಡ್ಡದಲ್ಲಿ ಗಾಯರಾಣ ಜಮೀನು ನೀಡಲಾಗಿದೆ. ಈಗಾಗಲೇ ಬೃಹತ್ ಕಟ್ಟಡಗಳು ತಲೆ ಎತ್ತಿವೆ. ಈ ಗುಡ್ಡದವರೆಗೆ ಸಂಪರ್ಕ ಕಲ್ಪಿಸಲು ಈ ಮೊದಲು ಇದ್ದ ರಸ್ತೆಯನ್ನೇ ವಿಶ್ವವಿದ್ಯಾಲಯದವರು ದುರಸ್ತಿ ಮಾಡಿ, ವಾಹನ ಓಡಾಟಕ್ಕೆ ಬಳಸಿಕೊಂಡಿದ್ದಾರೆ.

ಸರ್ವೆ ಪ್ರಕಾರ ಇಲ್ಲಿ 20 ಅಡಿ ಅಗಲದ ರಸ್ತೆ ಮಾತ್ರ ನಿರ್ಮಿಸಬೇಕು. ಆದರೆ, ಅಕ್ಕಪಕ್ಕದ ರೈತರ ಜಮೀನನ್ನೂ ಬಳಸಿಕೊಂಡು 30 ಅಡಿ ಅಗಲದ ರಸ್ತೆ ಮಾಡಲಾಗಿದೆ. ಗ್ರಾಮದ ವ್ಯಾಪ್ತಿಯಲ್ಲಿ ವಿಶ್ವವಿದ್ಯಾಲಯವೇ ನಿರ್ಮಾಣವಾಗುತ್ತದೆ ಎಂಬ ಖುಷಿಗಾಗಿ ರೈತರು ಸ್ವಯಂ ಪ್ರೇರಣೆಯಿಂದ ಜಮೀನು ಬಿಟ್ಟುಕೊಟ್ಟಿದ್ದಾರೆ. ಐದಾರು ಫೂಟ್ ಜಮೀನು ರಸ್ತೆಯಲ್ಲಿ ಹೋದರೂ ರೈತರು ಪರಿಹಾರ ಕೂಡ ಕೇಳಿಲ್ಲ. ವಿಶ್ವವಿದ್ಯಾಲಯದ ಜತೆಗೆ ತಮ್ಮೂರಿಗೂ ಅಭಿವೃದ್ಧಿ ಸಾಧ್ಯವಾಗುತ್ತದೆ, ಜಮೀನುಗಳಿಗೆ ಹೋಗಲು ಒಳ್ಳೆಯ ರಸ್ತೆ ನಿರ್ಮಾಣವಾಗುತ್ತದೆ, ತಮ್ಮ ಮಕ್ಕಳೇ ಅಲ್ಲಿ ಓದುತ್ತಾರೆ ಎಂಬ ಭಾವದಿಂದ ರೈತರು ಸುಮ್ಮನಾಗಿದ್ದಾರೆ.

ADVERTISEMENT

ಬೇಕಾಬಿಟ್ಟಿ ಕಾಮಗಾರಿ: ಸದ್ಯ ಈ ಮಾರ್ಗದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ವಿಶ್ವವಿದ್ಯಾಲಯ ಮುಂದಾಗಿದೆ. ಮೊದಲಿದ್ದ ರಸ್ತೆಯನ್ನು ಬಿಟ್ಟು ತಮ್ಮ ಅನುಕೂಲಕ್ಕೆ ತಕ್ಕಂತೆ ಈಗ ಗುರುತುಗಳನ್ನು ಹಾಕಿದ್ದಾರೆ. ಎಲ್ಲಿ ಬೇಕೋ ಅಲ್ಲಿ ತಿರುವುಗಳನ್ನು ಮಾಡುತ್ತಿದ್ದಾರೆ. ಸೌಜನ್ಯಕ್ಕೂ ರೈತರಿಗೆ ಮಾಹಿತಿ ನೀಡಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ರೈತರ ಚಿಂತೆಗೆ ಕಾರಣವಾಗಿದೆ.

ಮಾತ್ರವಲ್ಲ; ರಸ್ತೆಯಲ್ಲಿ ಎಲ್ಲೆಂದರಲ್ಲಿ ಬೋರ್‌ವೆಲ್‌ ಕೊರೆಸುತ್ತಿದ್ದಾರೆ. ಇದಕ್ಕೂ ರೈತರ ಅನುಮತಿ ಪಡೆದಿಲ್ಲ. ಪೈಪ್‌ಲೈನಿಗೆ ಜೆಸಿಬಿಯಿಂದ ನೆಲ ಅಗೆಸುತ್ತಿದ್ದಾರೆ. ಇದರಿಂದ ರೈತರ ಪೈಪ್‌ಗಳು ಒಡೆದುಹೋಗುವ ಆತಂಕ ಎದುರಾಗಿದೆ.

‘ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರೆಗೂ ಕಾಮಗಾರಿ ಮಾಡಲು ಬಿಡುವುದಿಲ್ಲ. ವಿಶ್ವವಿದ್ಯಾಲಯದ ಕುಲಪತಿ ಆದಿಯಾಗಿ ಎಲ್ಲರೂ ಸ್ಥಳಕ್ಕೇ ಬಂದು ಸಭೆ ಮಾಡಿ ರೈತರಿಗೆ ಮನವರಿಕೆ ಮಾಡಬೇಕು’ ಎಂದು ರೈತರಾದ ಉಮೇಶ ರೊಟ್ಟಿ, ತಮ್ಮಣ್ಣ ಗಾಣಗಿ, ಅಣ್ಣಪ್ಪಗೌಡ ಬಾರಿಗಿಡದ, ಚಂದ್ರು ನಂದಿ, ಶಾನೂರ ಕರಿದಾವಲ್, ರಾಮು ಪೊಲಿಸಿ, ಚೇತನ್ ಪಾಶ್ಚಾಪುರ, ಚನ್ನಬಸವ ಮಠಪತಿ, ಶಾಂತಯ್ಯ ಹಿರೇಮಠ, ಉಮೇಶ ನಂದಿ ಎಚ್ಚರಿಸಿದ್ದಾರೆ.

ದೂಳಿನಿಂದ ಬೆಳೆ ಸಂಪೂರ್ಣ ಹಾಳು

ರೈತರು ದಾರಿ ಬಿಟ್ಟುಕೊಟ್ಟ ತಪ್ಪಿಗೆ ಈಗ ಪರದಾಡುವ ಸ್ಥಿತಿ ಬಂದಿದೆ. ಸಿಮೆಂಟ್‌ ಇಟ್ಟಿಗೆ ಮರಳು ತುಂಬಿಕೊಂಡ ಭಾರಿ ವಾಹನಗಳು ದಿನವೂ ಈ ಮಾರ್ಗದಲ್ಲಿ ಓಡಾಡುತ್ತಿವೆ. ಅಪಾರ ಪ್ರಮಾಣದ ದೂಳು ಅಕ್ಕಪಕ್ಕದ ಬೆಳೆಗಳ ಮೇಲೆ ಮೆತ್ತಿಕೊಂಡಿದೆ. ಇದರಿಂದ ಬೆಳೆದುನಿಂತ ಕಬ್ಬನ್ನು ಕಾರ್ಖಾನೆಯವರು ತೆಗೆದುಕೊಂಡು ಹೋಗಿಲ್ಲ ಎಂದು ರೈತರ ಗೋಳಾಡುವಂತಾಗಿದೆ. ಜೋಳದ ಬೆಳೆ ತರಕಾರಿ ಬೆಳೆಗಳೂ ದೂಳುಮಯವಾದ್ದರಿಂದ ಯಾರೂ ಕೊಳ್ಳದ ಸ್ಥಿತಿ ತಲುಪಿವೆ. ಕೊನೆಗೆ ದನಗಳೂ ಇದನ್ನು ತಿನ್ನುತ್ತಿಲ್ಲ. ಇದರಿಂದ ರೈತರು ಹಾಕಿದ ಆದಾಯದ ಜತೆಗೆ ಬೆಳೆಯೂ ಹಾಳಾಗಿದೆ. ಯಾರೋ ಮಾಡಿದ ತಪ್ಪಿಗೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ವಿ.ವಿ ಕಟ್ಟಡಕ್ಕಿಂತಲೂ ಮೊದಲು ರಸ್ತೆ ನಿರ್ಮಾಣ ಮಾಡಬೇಕಾಗಿತ್ತು. ಕನಿಷ್ಠಪಕ್ಷ ವಾಹನಗಳು ದಾಟುವಾಗ ನೀರು ಸಿಂಪಡಿಸಿದರೆ ದೂಳು ಏಳುವುದಿಲ್ಲ. ಇದರಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂದು ರೈತರು ಮಾಡಿದ ಮನವಿಗೆ ವಿಶ್ವವಿದ್ಯಾಲಯ ಬಿಡಿಗಾಸಿನ ಬೆಲೆ ಕೊಟ್ಟಿಲ್ಲ ಎನ್ನುವುದು ಜನರ ತಕರಾರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.