
ನಂದಗಡ (ಬೆಳಗಾವಿ ಜಿಲ್ಲೆ): 'ಸಂಗೊಳ್ಳಿ ರಾಯಣ್ಣನ ಜತೆಗೆ ಯಾರು ಯಾರು ಗಲ್ಲಿಗೇರಿದ್ದಾರೋ ಅವರೆಲ್ಲರ ಸಮಾಧಿಗಳ ಅಭಿವೃದ್ಧಿ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಸೋಮವಾರ ರಾಯಣ್ಣನ ವಸ್ತು ಸಂಗ್ರಹಾಲಯ 'ವೀರಭೂಮಿ'ಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
'ರಾಣಿ ಚನ್ನಮ್ಮ ಸೆರೆಯಾದ ನಂತರ ಸ್ವಾತಂತ್ರ್ಯ ಹೋರಾಟವನ್ನು ಸಂಗೊಳ್ಳಿ ರಾಯಣ್ಣ ಹಾಗೂ ಅವರ ಸಹಚರರು ಮುಂದುವರಿಸಿದರು. ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರೇ ಆಗಿದ್ದಾರೆ. ಎಲ್ಲರ ವಂಶಸ್ಥರನ್ನು ಪತ್ತೆ ಮಾಡಿ, ವೀರರ ಸಮಾಧಿಗಳನ್ನು ಗುರುತಿಸಿ ಅಭಿವೃದ್ಧಿ ಮಾಡಲಾಗುವುದು' ಎಂದರು.
'ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಹಾಗೂ ನಂದಗಡ ಎರಡೂ ಸ್ಥಳಗಳು ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಾಗಬೇಕು ಎಂಬುದು ನನ್ನ ಉದ್ದೇಶ. ಅದಕ್ಕೆ ಬೇಕಾದ ಕೆಲಸಗಳನ್ನು ಮಾಡಲಾಗುತ್ತಿದೆ. ಮುಂದೆಯೂ ಇಲ್ಲಿಗೆ ಬಂದು ವಸತಿ ಉಳಿದು ಇನ್ನಷ್ಟು ಕೆಲಸ ಮಾಡುತ್ತೇನೆ' ಎಂದೂ ಹೇಳಿದರು.
'ಇತಿಹಾಸದ ಪ್ರಜ್ಞೆ ಇದ್ದವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಆ ಪ್ರಜ್ಞೆಯಿಂದ ಈ ವೀರಭೂಮಿ, ಸಂಗೊಳ್ಳಿಯಲ್ಲಿ ಸೈನಿಕ ಶಾಲೆ, ಶೌರ್ಯವನ ಮುಂತಾದ ಕೆಲಸಗಳನ್ನು ಮಾಡಿದ್ದೇವೆ' ಎಂದರು.
'ನಾವು ಗುಲಾಮಗಿರಿ ರೂಢಿಸಿಕೊಳ್ಳಬಾರದು. ಶಿಕ್ಷಣ, ಜ್ಞಾನ, ಸ್ವಾಭಿಮಾನ ನಮ್ಮ ಗುರಿಯಾಗಬೇಕು. ಸಂಗೊಳ್ಳಿ ರಾಯಣ್ಣ ಅವರ ಆದರ್ಶ, ಸ್ವಾಭಿಮಾನಗಳು ಎಲ್ಲರಿಗೂ ದಾರಿದೀಪವಾಗಬೇಕು' ಎಂದೂ ಕಿವಿ ಮಾತು ಹೇಳಿದರು.
ಇದಕ್ಕೂ ಮುನ್ನ ನಂದಗಡದ ಐತಿಹಾಸಿಕ ಕೆರೆಯ ಮಧ್ಯೆ ನಿರ್ಮಿಸಿದ ರಾಯಣ್ಣನ ಪ್ರತಿಮೆಯನ್ನೂ ಅವರು ಉದ್ಘಾಟನೆ ಮಾಡಿದರು. ಕೆರೆ ಅಭಿವೃದ್ಧಿ ಹಾಗೂ ವಿವಿಧ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ನಗರಾಭಿವೃದ್ಧಿ ಸಚಿವರಾದ ಭೈರತಿ ಎಸ್.ಸುರೇಶ ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ನವದೆಹಲಿ ಪ್ರಕಾಶ ಹುಕ್ಕೇರಿ, ವಾಯವ್ಯ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷ ಭರಮಗೌಡ ಕಾಗೆ, ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಅಧಿಕಾರಿಗಳು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.