
ರಾಯಬಾಗ: ಪಟ್ಟಣದ ಉತ್ತರ ದಿಕ್ಕಿನಲ್ಲಿರುವ 1008 ಮಹಾವೀರ ತೀರ್ಥಂಕರ ಬಸದಿ 12ನೇ ಶತಮಾನದ ಇತಿಹಾಸ ಹೊತ್ತಿರುವ ಜೈನ ಧಾರ್ಮಿಕ ತೀರ್ಥಕ್ಷೇತ್ರವಾಗಿದೆ. ನಯನ ಮನೋಹರ ಶೈಲಿಯ ಕಲಾಕೌಶಲದಲ್ಲಿ ನಿರ್ಮಿತವಾದ ಈ ಬಸದಿ ದಕ್ಷಿಣ ಭಾರತದ ಜೈನ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಈ ಬಸದಿಯ ವಿಶೇಷತೆ ಎಂದರೆ; ಇಲ್ಲಿ ಪ್ರತಿಷ್ಠಾಪಿಸಿದ ಖಡ್ಗಾಸನದಲ್ಲಿರುವ ಮಹಾವೀರ ತೀರ್ಥಂಕರರ ವಿಗ್ರಹ. ದಕ್ಷಿಣ ಭಾರತದಲ್ಲಿ ಈ ರೀತಿಯ ಭಂಗಿಯಲ್ಲಿ ಕಾಣಸಿಗುವ ಏಕೈಕ ವಿಗ್ರಹ ಎಂದೇ ಗುರುತಿಸಲಾಗಿದೆ. ವಿಗ್ರಹದ ಮುಖಭಾವ, ಶಿಲ್ಪದ ನಿಖರತೆ ಹಾಗೂ ಕಲ್ಲಿನ ಮೇಲಿನ ಸೂಕ್ಷ್ಮವಾಗಿ ಕೆತ್ತಿದ ಕೆಲಸಗಳು ರಟ್ಟರ ಕಾಲದ ಶಿಲ್ಪಕಲೆಯ ಅದ್ಭುತ ಸಾಕ್ಷ್ಯಗಳಾಗಿವೆ.
ಇದು ದಕ್ಷಿಣ ಭಾರತದಲ್ಲಿ ಅಪರೂಪವಾದ ವಿನ್ಯಾಸ, ಪಾದಗಳಿಂದ ಖಡ್ಗಾಕಾರದ ಸ್ಥಿತಿಯು ಧ್ಯಾನ, ತಪಸ್ಸು ಮತ್ತು ಧರ್ಮದ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ.
12ನೇ ಶತಮಾನದಲ್ಲಿ ರಟ್ಟರಾಜ ನಾಲ್ಕನೆಯ ಕಾರ್ತ್ಯವೀರ ತನ್ನ ತಾಯಿ ಚಂದ್ರಿಕಾದೇವಿ ಸಲುವಾಗಿ ಕಟ್ಟಿಸಿರುವ ಬಸದಿ ಇದಾಗಿದೆ. ಬಸದಿಯಲ್ಲಿ ಎರಡು ಗುಹೆಗಳಿದ್ದು, ಮುನಿಗಳು ಅಲ್ಲಿ ತಪ್ಪಸ್ಸು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮಹಾವೀರ ತೀರ್ಥಂಕರ ಮೂರ್ತಿಯ ಬಲಭಾಗದಲ್ಲಿ ಜ್ವಾಲಾಮಾಲಿನಿ ದೇವಿಯ ಹಾಗೂ ಕ್ಷೇತ್ರಪಾಲ ಬ್ರಹ್ಮದೇವರ ಮೂರ್ತಿಗಳು ಹಾಗೂ ಎಡಭಾಗದಲ್ಲಿ ಪದ್ಮಾವತಿಯ ಮೂರ್ತಿಗಳಿವೆ. ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ದ್ವಿಮುಖ ಹೊಂದಿರುವ ಯಕ್ಷರ ತಲೆಯ ಮೇಲೆ ಚತುರ್ಮುಖ ಜಿನಬಿಂಬದ ಮಹಾವೀರ ತೀರ್ಥಂಕರರ ಮೂರ್ತಿಯನ್ನು 2000ನೇ ಇಸವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.
ಬಸದಿಯಲ್ಲಿದೆ ಜೀವಂತ ಹಾವು: ಅಚ್ಚರಿಯೆಂದರೆ ಬಸದಿಯಲ್ಲಿ ಬೃಹತ್ ಗಾತ್ರದ ಒಂದು ನಾಗರಹಾವು ಇದ್ದು, ಆಗೊಮ್ಮೆ ಈಗೊಮ್ಮೆ ಬಂದು ಅದು ಭಕ್ತಾದಿಗಳಿಗೆ ದರ್ಶನ ನೀಡುತ್ತದೆ. ನಾಗರಹಾವಿನ ದರ್ಶನ ಪಡೆದುಕೊಂಡರೆ ಒಳ್ಳೆಯದಾಗುತ್ತದೆ ಎಂಬುದು ಇಲ್ಲಿನ ನಂಬಿಕೆ.
ಪ್ರತಿ ವರ್ಷ ನಡೆಯುವ ಮಹಾವೀರ ಜಯಂತಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿ ಭೇಟಿ ನೀಡಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಭಕ್ತಿಭಾವದ ಜೊತೆಗೆ ಇತಿಹಾಸ ಆಸಕ್ತರು ಹಾಗೂ ಶಿಲ್ಪಕಲಾ ಅಭಿಮಾನಿಗಳಿಗೂ ಇದು ಅಧ್ಯಯನದ ಕೇಂದ್ರವಾಗಿದೆ. ಬಸದಿಯ ಮೇಲ್ಬಾಗದಲ್ಲಿ ಮುನಿಸುವ್ರತ ತೀರ್ಥಂಕರ ಮೂರ್ತಿಯನ್ನು 2000ನೇ ಇಸವಿಯಲ್ಲಿ ಸ್ಥಾಪಿಸಲಾಗಿದೆ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳ ಉಪಸ್ಥಿತಿಯಲ್ಲಿ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿದೆ.
ವಕೀಲ ಮಹಾವೀರ ಖೊಂಬಾರೆ, ಪ್ರಶಾಂತ ಬಿರಾಜ, ಅಜೀತ ಉಗಾರೆ, ಶ್ರಿಪಾಲ ಬಡೋರೆ, ಶ್ರೀಧರ ಇಜಾರೆ, ಅನಿಲ ಶೆಟ್ಟಿ, ಸುಶೀಲ ಶೆಟ್ಟಿ, ಡಾ.ರಾಜೇಂದ್ರ ಅಕ್ಕಿ, ಡಾ.ಪ್ರಜ್ವಲ್ ನಾಯಿಕ, ರಾಜು ಜೋಕೆ, ಶೀತಲ ಕುಡಚಿ, ಯುವರಾಜ ಬಾಗಿ, ಭರತೇಶ ಶೆಟ್ಟಿ, ಬಾಬುಸಾಬ ಕಮತೆ, ದೀಪಕ ಇಜಾರೆ ಸೇರಿದಂತೆ ಜೈನ ಸಮುದಾಯದ ಪ್ರಮುಖರು ಬಸದಿಯ ಬಗ್ಗೆ ಮಾಹಿತಿ ನೀಡಿದರು.
ಮಹಾವೀರರ ವಿಗ್ರಹದ ಕಣ್ಣಿನಲ್ಲಿ ಕಾಣುವ ಶಾಂತಿ ನಮ್ಮೊಳಗಿನ ಅಶಾಂತಿ ಕರಗಿಸುತ್ತದೆ. ಇಲ್ಲಿನ ವಾತಾವರಣವೇ ಧ್ಯಾನದಂತಿದೆ. ಆತ್ಮ ಶುದ್ಧೀಕರಣದ ಸ್ಥಳವಿದು.– ಸನ್ಮತಿ ಆದಿನಾಥ ಶೆಟ್ಟಿ, ಜೈನ ಸಮುದಾಯದ ಕಾರ್ಯಕರ್ತ
ಈ ಬಸದಿ ನಮ್ಮ ಧಾರ್ಮಿಕ ನಂಬಿಕೆಯ ಮೂಲ. ಇಂತಹ ಸ್ಥಳಗಳು ನಮ್ಮ ಸಂಸ್ಕೃತಿಯ ಹೆಮ್ಮೆಯ ಭಾಗ. ಸರ್ಕಾರದಿಂದ ಇದರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು– ಸುನೀಲ ಶಾಂತಿನಾಥ, ಬೇಡಕಿಹಾಳೆ ಸಮುದಾಯದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.