ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ 29ರಂದು

​ಪ್ರಜಾವಾಣಿ ವಾರ್ತೆ
Published 28 ಮೇ 2019, 10:40 IST
Last Updated 28 ಮೇ 2019, 10:40 IST

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವವು ಇದೇ 29ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ‘ಜ್ಞಾನ ಸಂಗಮ’ ಆವರಣದಲ್ಲಿ ಆಯೋಜಿಸಲಾಗಿದೆ.

‘ಬಾಹ್ಯಾಕಾಶ ವಿಜ್ಞಾನಿ, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಡಾ. ಕೆ.ಕಸ್ತೂರಿ ರಂಗನ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಕುಲಪತಿ ಶಿವಾನಂದ ಹೊಸಮನಿ ನಗರದಲ್ಲಿ ಮಂಗಳವಾರ ತಿಳಿಸಿದರು.

ಘಟಿಕೋತ್ಸವದಲ್ಲಿ 67 ಪಿಎಚ್‌ಡಿ, 29,824 ಪದವಿ ವಿದ್ಯಾರ್ಥಿಗಳಿಗೆ, 2,457 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, 141 ಸರ್ಟಿಫಿಕೇಟ್‌ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು. ಒಟ್ಟು 32,281 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದುಕೊಳ್ಳಲಿದ್ದಾರೆ.

ADVERTISEMENT

ಚಿನ್ನದ ಪದಕ

‘ಅತ್ಯುತ್ತಮ ಸಾಧನೆ ಮಾಡಿದ 10 ಪದವಿ ವಿದ್ಯಾರ್ಥಿಗಳಿಗೆ, 22 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ದೊರೆಯಲಿದೆ. ಇದರ ಜೊತೆಗೆ ವಿಭಿನ್ನ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ 15 ಬಿ.ಎ ವಿದ್ಯಾರ್ಥಿಗಳಿಗೆ, 33 ಬಿ.ಕಾಂ ವಿದ್ಯಾರ್ಥಿಗಳಿಗೆ ಹಾಗೂ 10 ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುವುದು. 24 ವಿದ್ಯಾರ್ಥಿಗಳು, 66 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 90 ಜನರಿಗೆ ಚಿನ್ನದ ಪದಕ ನೀಡಲಾಗುವುದು’ ಎಂದು ವಿವರಣೆ ನೀಡಿದರು.

ಅತಿ ಹೆಚ್ಚು ಅಂಕ ಪಡೆದ ಬಿ.ಎ ವಿಭಾಗದ ಆಶಾ ಶಿವಾನಂದ ಮಲಕಪ್ಪನವರ, ಬಿ.ಕಾಂ ವಿಭಾಗದ ವಿಮಲಕುಮಾರ ಟಿ. ಬನ್ಸಾಲಿ ಹಾಗೂ ಬಿ.ಎಸ್ಸಿ ವಿಭಾಗದ ರೇಷ್ಮಾ ಅವರಿಗೆ ತಲಾ ಮೂರು ಚಿನ್ನದ ಪದಕಗಳು ಲಭಿಸಿವೆ.

ಇಬ್ಬರಿಗೆ ಗೌರವ ಡಾಕ್ಟರೇಟ್‌

‘ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಿಂದಗಿಯ ಸಾರಂಗ ಮಠದ ಪೀಠಾಧಿಪತಿ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಹಾಗೂ ಸಾಮಾಜಿಕ– ಔದ್ಯೋಗಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮಹಾರಾಷ್ಟ್ರದ ಸಾತಾರಾ ಪಟ್ಟಣದ ಭಾವೇಶ ಭಾಟಿಯಾ ಅವರಿಗೆ ಗೌರವ ಡಾಕ್ಟರೇಟ್‌ ನೀಡಲಾಗುವುದು’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ (ಮೌಲ್ಯಮಾಪನ) ರಂಗರಾಜ್‌ ವನದುರ್ಗ, ಕುಲಸಚಿವ ಸಿದ್ದು ಆಲಗೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.