ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ವು ವಿವಿಧ ಕೋರ್ಸ್‌ಗಳ ಪರೀಕ್ಷೆಗಳನ್ನು ಏ. 27ರಿಂದ ನಡೆಸಲಿದೆ.
ಸ್ನಾತಕ ಪದವಿಯ 1, 3 ಹಾಗೂ 5ನೇ ಸೆಮಿಸ್ಟರ್, ಸ್ನಾತಕೋತ್ತರ ಪದವಿಯ 1 ಮತ್ತು 3ನೇ ಸೆಮಿಸ್ಟರ್, ಎಂಬಿಎ 3ನೇ ಸೆಮಿಸ್ಟರ್ ಮತ್ತು ಎಂಸಿಎ 5ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ಪರಿಷ್ಕೃತ ವೇಳಾಪಟ್ಟಿಯನ್ನು ಕಾಲೇಜುಗಳಿಗೆ ಕಳುಹಿಸಲಾಗಿದೆ ಹಾಗೂ ವಿಶ್ವವಿದ್ಯಾಲಯದ ಜಾಲತಾಣದಲ್ಲೂ ಪ್ರಕಟಿಸಲಾಗಿದೆ. ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಅಂತ್ಯಗೊಂಡಿರುವುದರಿಂದ, ಬಾಕಿ ಉಳಿದ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ. ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷೆಯಲ್ಲಿ ನಡೆದ ಕುಲಪತಿಗಳ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ ತಿಳಿಸಿದ್ದಾರೆ.
‘ಕೋವಿಡ್ ಕಾರಣದಿಂದಾಗಿ ವಿದ್ಯಾರ್ಥಿಗಳು ಗೈರು ಹಾಜರಾದಲ್ಲಿ, ಅಂಥವರು ಮುಂದಿನ ಪರೀಕ್ಷೆ ತೆಗೆದುಕೊಳ್ಳುವಾಗ ಅದನ್ನು ‘ಪ್ರಥಮ ಅವಕಾಶ’ವೆಂದು ಪರಿಗಣಿಸಲಾಗುವುದು. ಸೋಂಕಿತರು ಪರೀಕ್ಷೆಗೆ ಹಾಜರಾಗಲು ಬಯಸಿದಲ್ಲಿ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವಂತೆ ಕಾಲೇಜುಗಳಿಗೆ ಸೂಚಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.