ADVERTISEMENT

ಯುವಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ: ಸಾಹಿತಿ ಗುರುದೇವಿ ಹುಲೆಪ್ಪನವರಮಠ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 2:52 IST
Last Updated 29 ಡಿಸೆಂಬರ್ 2025, 2:52 IST
ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಬೆಳಗಾವಿ: ‘ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದ ಇಂದು ಯುವಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ’ ಎಂದು ಸಾಹಿತಿ ಗುರುದೇವಿ ಹುಲೆಪ್ಪನವರಮಠ ಕಳವಳ ವ್ಯಕ್ತಪಡಿಸಿದರು. 

ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಹಾಗೂ ‘ನಾನು ನಮ್ಮವರೊಂದಿಗೆ ಫೌಂಡೇಷನ್’ ಭಾನುವಾರ ಆಯೋಜಿಸಿದ್ದ ಕಟ್ಟೀಮನಿ ಕಥಾ-ಕಥನ ಹಾಗೂ ಬೆಟಗೇರಿ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ಯುವಜನರಲ್ಲಿ ಕತೆ, ಕಾದಂಬರಿ ಓದುವ ಮತ್ತು ಕತೆ ಹೇಳುವ ಹವ್ಯಾಸಗಳಿದ್ದವು. ಆದರೆ, ಇಂದು ಕಾಲ ಬದಲಾಗಿದೆ. ಹಾಗಾಗಿ ಎಲ್ಲರನ್ನೂ ಮತ್ತೆ ಓದಿನತ್ತ ಸೆಳೆಯಬೇಕಿದೆ. ಬಸವರಾಜ ಕಟ್ಟೀಮನಿ ಮತ್ತು ಬೆಟಗೇರಿ ಕೃಷ್ಣಶರ್ಮ ಅವರ ಸಾಹಿತ್ಯವನ್ನು ಯುವಜನತೆಗೆ ಪರಿಚಯಿಸುವ ಕೆಲಸ ಆಗಬೇಕಿದೆ’ ಎಂದರು. 

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ, ‘ಇಂದು ಸ್ತ್ರೀವಾದದ ಬಗ್ಗೆ ಹೆಚ್ಚು ಚರ್ಚೆ ಮತ್ತು ವ್ಯಾಖ್ಯಾನಗಳಾಗುತ್ತಿವೆ. ಆದರೆ, 21ನೇ ಶತಮಾನದ ಆರಂಭದ ದಿನಗಳಲ್ಲೇ ಬಸವರಾಜ ಕಟ್ಟೀಮನಿ ಅವರು ಸ್ತ್ರೀವಾದಿ ನಿಲುವುಗಳನ್ನು ತಮ್ಮ ಕತೆ, ಕಾದಂಬರಿಗಳ ಮೂಲಕ ಪ್ರತಿಪಾದಿಸಿದ್ದರು. ಅಷ್ಟೇ ಅಲ್ಲ ಬರೆದಂತೆ ಬದುಕಿ ತೋರಿಸಿದ್ದರು’ ಎಂದರು.

ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಸದಸ್ಯ ಎಚ್.ಬಿ.ಕೋಲಕಾರ, ‘ಕೃಷ್ಣಶರ್ಮ ಅವರ ಜನಪದ ಸಾಹಿತ್ಯವು ಗ್ರಾಮ್ಯ ಬದುಕಿನ ಸಂಸ್ಕೃತಿ ಬಿಂಬಿಸುವಂಥದ್ದು’ ಎಂದು ಸ್ಮರಿಸಿದರು.

ಟ್ರಸ್ಟ್‌ನ ಮತ್ತೊಬ್ಬ ಸದಸ್ಯೆ ಗೀತಾಂಜಲಿ‌ ಕುರಡಗಿ, ‘ಬೆಟಗೇರಿ ಕೃಷ್ಣಶರ್ಮ ಮತ್ತು ಬಸವರಾಜ ಕಟ್ಟೀಮನಿ ಅವರ ಹೆಸರಿನಲ್ಲಿ ಪದವಿ ಕಾಲೇಜುಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದೆ. ಅಂತೆಯೇ ಫೆಲೋಷಿಪ್ ನೀಡಲಾಗುತ್ತಿದೆ’ ಎಂದರು.

ನಾನು ನಮ್ಮವರೊಂದಿಗೆ ಫೌಂಡೇಷನ್ ಅಧ್ಯಕ್ಷೆ ಸರ್ವಮಂಗಳಾ ಅರಳಿಮಟ್ಟಿ ಆಶಯ ನುಡಿಗಳನ್ನಾಡಿದರು. ಸಾಹಿತಿ ಸಿದ್ದಗಂಗಮ್ಮ ಉಪಸ್ಥಿತರಿದ್ದರು. 

ಬಸವರಾಜ ಕಟ್ಟೀಮನಿ ಅವರ ಕತೆಗಳನ್ನು 10 ಮಂದಿ ಮಹಿಳಾ ಸಾಹಿತಿಗಳು ಪ್ರಸ್ತುತಪಡಿಸಿದರು. ಬೆಟಗೇರಿ ಕೃಷ್ಣಶರ್ಮ ಅವರ ನಲ್ವಾಡುಗಳನ್ನು 12 ಕಲಾವಿದರು ಹಾಡಿ ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.