ADVERTISEMENT

ಕೋವಿಡ್ ಸಂಕಷ್ಟದಲ್ಲೂ ಗೋಲ್ಡ್‌ ಬಾಂಡ್‌ಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 13:31 IST
Last Updated 18 ಸೆಪ್ಟೆಂಬರ್ 2021, 13:31 IST
   

ಬೆಳಗಾವಿ: ಭಾರತೀಯ ಅಂಚೆ ಇಲಾಖೆಯಿಂದ ಈಚೆಗೆ ನಡೆಸಿದ ‘ಸಾವರಿನ್‌ ಗೋಲ್ಡ್ ಬಾಂಡ್’ ಮಾರಾಟ ಪ್ರಕ್ರಿಯೆಯಲ್ಲಿ ಬೆಳಗಾವಿ ವಿಭಾಗದಲ್ಲಿ ದಾಖಲೆಯಾಗಿದೆ. ಕೋವಿಡ್ ಸಂಕಷ್ಟದ ನಡುವೆಯೂ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದು ವಿಶೇಷ.

ಈ ಬಗ್ಗೆ ‘ಪ್ರಜಾವಾಣಿ’ಗೆ ಶನಿವಾರ ಮಾಹಿತಿ ನೀಡಿದ ವಿಭಾಗದ ಅಂಚೆ ಸೂ‍ಪರಿಂಟೆಂಡೆಂಟ್ ಎಚ್‌.ಬಿ. ಹಸಬಿ, ‘ನಮ್ಮ ವಿಭಾಗದಲ್ಲಿ 14 ಕೆ.ಜಿ.ಯಷ್ಟು ಸಾವರಿನ್ ಗೋಲ್ಡ್ ಬಾಂಡ್ ಖರೀದಿಯಾಗಿದೆ. ಇದರಿಂದ ₹ 6.50 ಕೋಟಿ ಸಂಗ್ರಹವಾಗಿದೆ. ಈ ಮೂಲಕ ವಿಭಾಗವು ದೇಶದಲ್ಲೇ ಮೊದಲ ಸ್ಥಾನ ಗಳಿಸಿದೆ’ ಎಂದು ತಿಳಿಸಿದರು.

‘1,300 ಮಂದಿ (ಅರ್ಜಿಗಳು) ಬಾಂಡ್‌ಗಳನ್ನು ಖರೀದಿಸಿದ್ದಾರೆ. ಇವರಲ್ಲಿ ಬೆಳಗಾವಿ ನಗರ ಹಾಗೂ ತಾಲ್ಲೂಕಿನವರು ಹೆಚ್ಚಿದ್ದಾರೆ. 2019ರಲ್ಲಿ 213 ಅರ್ಜಿಗಳ ಮೂಲಕ 3,481 ಗ್ರಾಂ. ಚಿನ್ನದ ಬಾಂಡ್ ಖರೀದಿಯಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಹೂಡಿಕೆ ಮಾಡುವವರ ಅನುಕೂಲಕ್ಕಾಗಿ ಇಲಾಖೆಯು 2015ರಿಂದ ಸಾವರಿನ್‌ ಗೋಲ್ಡ್ ಬಾಂಡ್ ಯೋಜನೆ ಆರಂಭಿಸಿದೆ. ವಿಶೇಷ ಸಂದರ್ಭಗಳಲ್ಲಿ ಗೋಲ್ಡ್ ಬಾಂಡ್ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಒಳ್ಳೆಯ ಹೂಡಿಕೆ ಇದಾಗಿರುವುದರಿಂದಾಗಿ ಗ್ರಾಹಕರು ಮುಂದೆ ಬರುತ್ತಿದ್ದಾರೆ. ಬಾಂಡ್‌ನ ಮರಳಿಕೆ ಅವಧಿಯು 8 ವರ್ಷವಾಗಿದ್ದು, 5, 6 ಅಥವಾ 7ನೇ ವರ್ಷದಲ್ಲಿ ಹಿಂಪಡೆಯುವುದಕ್ಕು ಅವಕಾಶ ಕಲ್ಪಿಸಲಾಗಿದೆ. ಬಾಂಡ್ ಮೂಲಕ ತೊಡಗಿಸಿದ ಹಣಕ್ಕೆ ವಾರ್ಷಿಕ ಶೇ 2.5ರಷ್ಟು ಬಡ್ಡಿ ಕೂಡ ನೀಡಲಾಗುತ್ತದೆ. ಈ ಹೂಡಿಕೆಗೆ ಜಿಎಸ್‌ಟಿ ಹೊರೆ ಇಲ್ಲ; ಟಿಡಿಎಸ್ ಕಡಿತ ಆಗುವುದಿಲ್ಲ’ ಎಂದು ಹೇಳಿದರು.

‘ಚಿನ್ನ ಖರೀದಿ ಮೇಲಿನ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕದ ಹೊರೆ ಇದರಲ್ಲಿರುವುದಿಲ್ಲ. ಕನಿಷ್ಠ 1 ಗ್ರಾಂ.ನಿಂದ 4 ಕೆ.ಜಿ.ವರೆಗೆ ಖರೀದಿಗೆ ಅವಕಾಶವಿದೆ. ಬಾಂಡ್ ಆಗಿರುವ ಕಾರಣ, ಕಳ್ಳರು ಕದಿಯುವ ಭಯವೂ ಇರುವುದಿಲ್ಲ. ಆಗತ್ಯಬಿದ್ದಾಗ ಅಡವಿಟ್ಟು ಸಾಲ ಪಡೆಯಬಹುದಾದ ಅನುಕೂಲವೂ ಇದೆ. ಆದ್ದರಿಂದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನವರು ಎಲ್ಲವನ್ನೂ ನಿರ್ವಹಿಸುತ್ತಾರೆ. ಇಲಾಖೆಯಿಂದ ಬಾಂಡ್‌ಗಳನ್ನು ತಲುಪಿಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.