ADVERTISEMENT

₹ 9 ಕೋಟಿ ವೆಚ್ಚದಲ್ಲಿ ಶೀತಲೀಕರಣ ಘಟಕ: ನಬಾರ್ಡ್‌ ಅನುಮತಿ

ಎಪಿಎಂಸಿಯಲ್ಲಿ 2,240 ಎಂ.ಟಿ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ನಬಾರ್ಡ್‌ ಅನುಮತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 15:58 IST
Last Updated 17 ಜನವರಿ 2025, 15:58 IST
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸದ ಜಗದೀಶ ಶೆಟ್ಟರ್‌ ಮಾನಾಡಿದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸದ ಜಗದೀಶ ಶೆಟ್ಟರ್‌ ಮಾನಾಡಿದರು   

ಬೆಳಗಾವಿ: ‘ನಬಾರ್ಡ್’ ಗ್ರಾಮೀಣ ಮೂಲ ಅಭಿವೃದ್ಧಿ ಅನುದಾನ 2024–25 (ಆರ್‌ಐಡಿಎಫ್‌) ಯೋಜನೆಯಡಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ₹ 9.025 ಕೋಟಿ ಮೌಲ್ಯದ 2,240 ಎಂ.ಟಿ ಸಾಮರ್ಥ್ಯದ ಶೀತಲೀಕರಣ ಘಟಕ ಸ್ಥಾಪನೆಗೆ ಅನುಮತಿ ದೊರೆತಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ರೈತರು ಬೆಳೆದ ಉತ್ಪನ್ನದ ಸುಮಾರು ಶೇ 25ರಿಂದ ಶೇ 30ರಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ಶೀತಲೀಕರಣ ಘಟಕ ಇಲ್ಲದೇ ನಷ್ಟವಾಗುತ್ತಿವೆ’ ಎಂದರು.

‘ಇದು ಹೆಚ್ಚಾಗಿ ಕೊಳೆತು ಹೋಗುವಂತಹ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಹೀಗಾಗಿ, ರೈತರು ಅಧಿಕವಾಗಿ ಬರುವಂತಹ ಲಾಭ ಕಳೆದುಕೊಳ್ಳಬೇಕಾಗಿದೆ. ಇದನ್ನು ತಡೆಯಲು ರೈತರು ಬೇಕಾಬಿಟ್ಟಿಯಾದ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪ್ರಸಂಗ ಎದುರಾಗುತ್ತಿತ್ತು’ ಎಂದರು.

ADVERTISEMENT

‘ಇಷ್ಟು ವರ್ಷಗಳಿಂದಲೂ ಎಪಿಎಂಸಿಯಲ್ಲಿ ಶೀತಲೀಕರಣ ಘಟಕ ಇಲ್ಲದಿರುವುದು ಅಚ್ಚರಿ. ಹೆಚ್ಚಾಗಿ ತರಕಾರಿ, ಹಣ್ಣು ಬೆಳೆಯುವಲ್ಲಿ ಇದು ಬಹಳ ಅಗತ್ಯವಾಗಿದೆ. ದಶಕಗಳಿಂದಲೂ ರೈತರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಈಗ ಕಾಲ ಕೂಡಿ ಬಂದಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ಅನುಕೂಲವಾಗುವಂಥ ಯೋಜನೆಗಳನ್ನು ತರಲಾಗುವುದು’ ಎಂದರು.

‘ನೂತನ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಿಂದ ಜಿಲ್ಲೆಯ ಮತ್ತು ಸುತ್ತಮುತ್ತಲಿನ ರೈತರಿಗೆ ತುಂಬಾ ಸಹಾಯಕವಾಗಲಿದೆ. ಇಲ್ಲಿ ಹೇರಳವಾಗಿ ಬೆಳೆಯಲಾಗುವ ಆಲೂಗಡ್ಡೆ, ಮೆಣಸಿನಕಾಯಿ, ತರಕಾರಿ, ದ್ವಿದಳ ಧಾನ್ಯ, ಹಣ್ಣು ಮತ್ತು ಇತ್ಯಾದಿ ಬೆಳೆಗಳನ್ನು ಅನೇಕ ದಿನಗಳವರೆಗೆ ಜಿಲ್ಲೆಯ ರೈತ ಸಮುದಾಯ ಶೇಖರಿಸಿ ಇಡಬಹುದಾಗಿದೆ. ಹೀಗೆ ಇಡುವುದರಿಂದ ಇದರ ಗುಣಮಟ್ಟ, ತಾಜಾತನ ಹಾಗೂ ಪೌಷ್ಟಿಕಾಂಶ ಮೌಲ್ಯವನ್ನು ಹೆಚ್ಚಿನ ಕಾಲದವರೆಗೆ ಕಾಪಾಡುವ ನಿಟ್ಟಿನಲ್ಲಿ ಖಂಡಿತವಾಗಿಯೂ ಇಲ್ಲಿನ ರೈತರಿಗೆ ಅನುಕೂಲಕರವಾಗಲಿದೆ’ ಎಂದೂ ಅವರು ವಿವರಿಸಿದರು.

ಸೆ. 27ರಂದು ನಡೆದ ಬ್ಯಾಂಕರ್ಸ್ ಸಭೆಯಲ್ಲಿ ಜಿಲ್ಲಾ ನಬಾರ್ಡ್ ಅಧಿಕಾರಿಗಳಿಗೆ ಬೆಳಗಾವಿಯಲ್ಲಿ ರೈತರಿಗೆ ಅನುಕೂಲವಾಗಲು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆಯ ಬಗ್ಗೆ ವಿಷಯ ಅವಲೋಕಿಸಲು ಸಂಸದರು ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.