ADVERTISEMENT

ಯಮಸಲ್ಲೇಖನ ವ್ರತ ಮೂಲಕ ದೇಹತ್ಯಾಗ; ಆಚಾರ್ಯ 108 ವಿದ್ಯಾಸಾಗರ ಮಹಾರಾಜ ಜಿನೈಕ್ಯ

ಸದಲಗಾದಲ್ಲಿ ಸ್ವಯಂಪ್ರೇರಿತ ಬಂದ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 14:23 IST
Last Updated 18 ಫೆಬ್ರುವರಿ 2024, 14:23 IST
<div class="paragraphs"><p>ಆಚಾರ್ಯ 108 ವಿದ್ಯಾಸಾಗರ ಮಹಾರಾಜ</p></div>

ಆಚಾರ್ಯ 108 ವಿದ್ಯಾಸಾಗರ ಮಹಾರಾಜ

   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಜೈನ ಧರ್ಮದ ಮಹಾನ್‌ ಸಾಧಕ, ಆಚಾರ್ಯ 108 ವಿದ್ಯಾಸಾಗರ ಮಹಾರಾಜ ಅವರು ಛತ್ತೀಸ್‌ಘಡ ರಾಜ್ಯದ ಡೊಂಗರಘಡದಲ್ಲಿ ಸಲ್ಲೇಖನ ವ್ರತದ ಮೂಲಕ ಜಿನೈಕ್ಯರಾದರು. ಅವರು ಮೂಲತಃ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದವರು.

ಮೂರು ದಿನಗಳ ಹಿಂದೆ ಯಮ ಸಲ್ಲೇಖನ ವ್ರತ ಕೈಗೊಂಡ ವಿದ್ಯಾಸಾಗರ ಮಹಾರಾಜರು, ಭಾನುವಾರ ನಸುಕಿನ 2.30ಕ್ಕೆ ದೇಹ ತ್ಯಾಗ ಮಾಡಿದರು. ಅವರು ಜಿನೈಕ್ಯರಾದ ವಿಷಯ ಜಿಲ್ಲೆಯಲ್ಲಿ ಕ್ಷಿಪ್ರವಾಗಿ ಹರಡಿತು. ಸದಲಗಾ ಪಟ್ಟಣದ ಎಲ್ಲ ವ್ಯಾಪಾರಸ್ಥರೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ಜೈನ ಸಮುದಾಯದ ಜನ ಮೌನ ಮೆರವಣಿಗೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ADVERTISEMENT

ಶ್ರದ್ಧಾನಂದ ಸ್ವಾಮೀಜಿ, ಮುನಿ ಹೇಮಸಾಗರ ಮಹಾರಾಜ, ದೇವಧರ ಮಹಾರಾಜ, ಶಾಸಕ ಗಣೇಶ ಹುಕ್ಕೇರಿ, ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ, ಅರುಣ ದೇಸಾಯಿ, ಪ್ರಕಾಶ ಪಾಟೀಲ, ಜಯಕುಮಾರ ಖೋತ ಮುಂತಾದವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

1946ರ ಅಕ್ಟೋಬರ್ 10ರಂದು ಸದಲಗಾ ಪಟ್ಟಣದಲ್ಲಿ ಅವರು ಜನಿಸಿದರು. ತಂದೆ ಮಲ್ಲಪ್ಪ ಅಸ್ಟಗೆ, ತಾಯಿ ಶ್ರೀಮಂತಿ ಅಸ್ಟಗೆ. ಮುನಿ ಅವರ ಪೂರ್ವಾಶ್ರಮದ ಹೆಸರು ವಿದ್ಯಾಧರ ಅಸ್ಟಗೆ. ಪ್ರಾಥಮಿಕ ಶಿಕ್ಷಣವನ್ನು ಸದಲಗಾದಲ್ಲಿ, ಪ್ರೌಢ ಶಿಕ್ಷಣವನ್ನು ಶಮನೇವಾಡಿ– ಬೇಡಕಿಹಾಳದಲ್ಲಿ ಪಡೆದುಕೊಂಡರು. ದೇಶಭೂಷಣ ಮಹಾರಾಜರೊಂದಿಗೆ ಶ್ರವಣ ಬೆಳಗೊಳ ಯಾತ್ರೆ ಕೈಗೊಂಡ ಅವರು, ತಮ್ಮ 22ನೇ ವಯಸ್ಸಿನಲ್ಲಿ ಆಚಾರ್ಯ ಜ್ಞಾನಸಾಗರ ಮಹಾರಾಜರಿಂದ ಮುನಿ ದೀಕ್ಷೆ ಪಡೆದಿದ್ದರು.

ಆಚಾರ್ಯ 108 ವಿದ್ಯಾಸಾಗರ ಮಹಾರಾಜ ಅವರು ಜಿನೈಕ್ಯರಾದ ಕಾರಣ, ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿ ಶ್ರಾವಕಿಯರು ಮೌನ ಮೆರವಣಿಗೆ ನಡೆಸಿದರು

1968ರಲ್ಲಿ ರಾಜಸ್ತಾನದ ಅಜ್ಮೇರಾದಲ್ಲಿ ದೀಕ್ಷೆ ಪಡೆದ ವಿದ್ಯಾಸಾಗರ ಮಹಾರಾಜರಿಗೆ 1975ರಲ್ಲಿ ಜ್ಞಾನ ಸಾಗರ ಮಹಾರಾಜರು ‘ಆಚಾರ್ಯ’ ಪದವಿ ನೀಡಿದರು. ನಂತರ ಅವರು ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಘಡ, ಬಿಹಾರ, ರಾಜಸ್ಥಾನ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳನ್ನು ಸುತ್ತಿದರು. 130 ಬಾಲ ಬ್ರಹ್ಮಚಾರಿಗಳಿಗೆ ಮುನಿದೀಕ್ಷೆ, 172 ಸ್ತ್ರೀಯರಿಗೆ ಆರಿಕಾ ದೀಕ್ಷೆ, 56 ಜನರಿಗೆ ಐಲಕ ದೀಕ್ಷೆ, 66 ಜನರಿಗೆ ಕ್ಷುಲ್ಲಕ ದೀಕ್ಷೆ, 3 ಸ್ತ್ರೀಯರಿಗೆ ಕ್ಷುಲ್ಲಿಕಾ ದೀಕ್ಷೆ, 1 ಸಾವಿಕ್ಕಿಂತ ಹೆಚ್ಚು ಯುವಕರಿಗೆ ಆಜೀವನ ಬ್ರಹ್ಮಚರ್ಯ ವೃತ ದೀಕ್ಷೆಯನ್ನು ನೀಡಿದ್ದಾರೆ.

9ನೇ ತರಗತಿಯವರೆಗೆ ಮಾತ್ರ ಓದಿದ್ದ ವಿದ್ಯಾಸಾಗರ ಮಹಾರಾಜರು ಹಿಂದಿ ಭಾಷೆಯಲ್ಲಿ ರಚಿಸಿದ ‘ಮೂಕ ಮಾಟಿ’ ಗ್ರಂಥ ಸಾಕಷ್ಟು ಪ್ರಸಿದ್ದಿ ಪಡೆದಿದೆ. ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದರು. ಹಿಂದಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.

ಕುಟುಂಬದವರಿಗೂ ದೀಕ್ಷೆ: ವಿದ್ಯಾಸಾಗರ ಮುನಿ ಮಹಾರಾಜರ ಮೂವರು ಸಹೋದರರು ದಿಗಂಬರ ದೀಕ್ಷೆಯನ್ನು ತೆಗೆದುಕೊಂಡಿದ್ದು, ಇಬ್ಬರು ಸಹೋದರಿಯರು ಸಾದ್ವಿಯಾಗಿದ್ದಾರೆ. ಆಚಾರ್ಯ ವಿದ್ಯಾಸಾಗರ ಮಹಾರಾಜರ ಜನ್ಮಸ್ಥಳದಲ್ಲಿ ಶಾಂತಿನಾಥನ ವಿಗ್ರಹ ಸ್ಥಾಪಿಸಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ದರ್ಶನ ಪಡೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.