ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿ
ಬೆಳಗಾವಿ: ‘ನಗರದಲ್ಲಿ ಮಾ.16ರಂದು ಅದ್ದೂರಿಯಾಗಿ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಆಚರಿಸಲಾಗುವುದು’ ಎಂದು ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 9ಕ್ಕೆ ರಾಣಿ ಚನ್ನಮ್ಮನ ವೃತ್ತದಿಂದ ಭವ್ಯ ಮೆರವಣಿಗೆ ಆರಂಭವಾಗಲಿದೆ. 10.30ಕ್ಕೆ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆಗಮಿಸುವರು. ಶಾಸಕ ಆಸಿಫ್ ಸೇಠ್ ಅಧ್ಯಕ್ಷತೆ ವಹಿಸುವರು. ರೇಣುಕಾಚಾರ್ಯರ ಕುರಿತು ಎಸ್.ಎಂ.ಗಂಗಾಧರಯ್ಯ ಉಪನ್ಯಾಸ ನೀಡುವರು. ನಟಿ ಪ್ರಿಯಾ ಸವಡಿ ಮತ್ತಿತರ ಗಣ್ಯರು ಪಾಲ್ಗೊಳ್ಳುವರು’ ಎಂದರು.
‘ಜಾತಿ–ಜಾತಿಗಳ ನಡುವಿನ ವೈಷಮ್ಯ ಮೀರಿ ಬೆಳೆದ ರೇಣುಕಾಚಾರ್ಯರು, ‘ಮಾನವ ಧರ್ಮಕ್ಕೆ ಜಯವಾಗಲಿ’ ಎಂಬ ಸಂದೇಶ ಕೊಟ್ಟವರು. ಎಲ್ಲ ಸಮುದಾಯದವರು ಒಗ್ಗೂಡಿ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದೇವೆ. ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರನ್ನೂ ಆಹ್ವಾನಿಸುತ್ತಿದ್ದೇವೆ’ ಎಂದು ತಿಳಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ಈ ಹಿಂದೆ ಮಠಗಳಲ್ಲಿ ಮಾತ್ರ ರೇಣುಕಾಚಾರ್ಯ ಜಯಂತ್ಯುತ್ಸವ ಆಚರಿಸಲಾಗುತ್ತಿತ್ತು. ಮೂರು ವರ್ಷಗಳಿಂದ ಸರ್ಕಾರದಿಂದಲೇ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. ರೇಣಕಾಚಾರ್ಯರು ಒಂದೇ ಜಾತಿ, ಮತ ಹಾಗೂ ಪಂಗಡಕ್ಕೆ ಸೀಮಿತವಾದವರಲ್ಲ. ಹಾಗಾಗಿ ಎಲ್ಲ ಸಮುದಾಯದವರೂ ಇದರಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.
ಚಂದ್ರಶೇಖರಯ್ಯ ಸವಡಿ, ವಿರೂಪಾಕ್ಷಯ್ಯ ನೀರಲಗಿಮಠ, ಚಂದ್ರಪ್ಪ ಸಂಗೊಳ್ಳಿ, ಸುರೇಶ ಯಾದವ ಶ್ರೀಶೈಲ ಮಠದ, ಸೋಮಶೇಖರ ಮಠದ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.