ADVERTISEMENT

ಸಂಶೋಧನೆಗಳು ಜಾಗತಿಕ ಸಂವೇದನೆ ಧ್ವನಿಸಬೇಕು

ಪ್ರೊ.ಎಚ್.ಎಂ. ಮಹೇಶ್ವರಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 11:23 IST
Last Updated 5 ಜನವರಿ 2021, 11:23 IST
ಬೆಳಗಾವಿಯ ಆರ್‌ಸಿಯುನಲ್ಲಿ ನಡೆದ ಸಂಶೋಧಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ಎಸ್.ಎಂ. ಗಂಗಾಧರಯ್ಯ ಹಾಗೂ ಡಾ.ಶೋಭಾ ನಾಯಕ ಸಂಪಾದಿಸಿದ ‘ಗಾಂಧಿ ತತ್ವಾನ್ವೇಷಣೆ’ ಪುಸ್ತಕ ಬಿಡುಗಡೆ ಮಾಡಲಾಯಿತು
ಬೆಳಗಾವಿಯ ಆರ್‌ಸಿಯುನಲ್ಲಿ ನಡೆದ ಸಂಶೋಧಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ಎಸ್.ಎಂ. ಗಂಗಾಧರಯ್ಯ ಹಾಗೂ ಡಾ.ಶೋಭಾ ನಾಯಕ ಸಂಪಾದಿಸಿದ ‘ಗಾಂಧಿ ತತ್ವಾನ್ವೇಷಣೆ’ ಪುಸ್ತಕ ಬಿಡುಗಡೆ ಮಾಡಲಾಯಿತು   

ಬೆಳಗಾವಿ: ‘ಸಂಶೋಧನೆಗಳು ಜಾಗತಿಕ ಸಂವೇದನೆಯನ್ನು ಧ್ವನಿಸಬೇಕು. ಅವು ಸಾಂಪ್ರದಾಯಿಕ ಮಾದರಿಗಳನ್ನು ಅವಲಂಬಿಸದೆ ಬಹುಶಿಸ್ತೀಯ ಮಾದರಿಯಲ್ಲಿ ರೂಪುಗೊಳ್ಳಬೇಕು’ ಎಂದು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಸೋಮವಾರ ಆಯೋಜಿಸಿದ್ದ ಕನ್ನಡ ಸಂಶೋಧಕರ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

‘ಡಾ.ಶಂಬಾ ಜೋಶಿ ಅವರು ಕಳೆದ ಶತಮಾನದಲ್ಲಿ ಸಂಶೋಧನಾ ಮಾದರಿಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅವರು ತೋರಿದ ಸಂಶೋಧನಾ ಮಾರ್ಗಗಳು ವಾಸ್ತವವಾಗಿ ಯುವ ತರುಣ ಪೀಳಿಗೆಗೆ ಕೈಗನ್ನಡಿಗಳಾಗಿವೆ’ ಎಂದರು.

ADVERTISEMENT

‘ಡಾ.ಶಂಬಾ ಜನ್ಮ ದಿನವಾದ ಜ.4ನ್ನು ಕನ್ನಡ ಸಂಶೋಧಕರ ದಿನವೆಂದು ಆಚರಿಸಲಾಗುತ್ತಿದೆ. ಅವರು ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವಂತಿಲ್ಲ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಂ. ರಾಮಚಂದ್ರಗೌಡ, ‘ಕನ್ನಡ ಸಂಶೋಧನೆಗಳು ಹೆಚ್ಚಾಗಬೇಕು ಹಾಗೂ ಗುಣಮಟ್ಟ ಕಾಪಾಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಎಂ. ಗಂಗಾಧರಯ್ಯ, ‘ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನಾ ಚಟುವಟಿಕೆಗಳು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಸಾಂಸ್ಕೃತಿಕ ಅನನ್ಯತೆ ಎತ್ತಿ ಹಿಡಿದಿವೆ’ ಎಂದರು.

ವಿಭಾಗದ ಅಧ್ಯಾಪಕರಾದ ಡಾ.ಶೋಭಾ ನಾಯಕ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ಡಾ.ಪಿ. ನಾಗರಾಜ ಇದ್ದರು.

ಪ್ರಮೋದ ತಳವಾರ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಹಿರೇಮಠ ಸ್ವಾಗತಿಸಿದರು. ಡಾ.ಮಹೇಶ ಗಾಜಪ್ಪನವರ ಪರಿಚಯಿಸಿದರು. ಬಸವರಾಜ ಹುಲಮನಿ ನಿರೂಪಿಸಿದರು. ಸಂತೋಷ ನಾಯಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.