ADVERTISEMENT

ಒಳಮೀಸಲಾತಿ: ಹಡ‍ಪದ ಸಮಾಜ ಆಗ್ರಹ

ಸುವರ್ಣ ವಿಧಾನಸೌಧ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 11:32 IST
Last Updated 18 ಡಿಸೆಂಬರ್ 2018, 11:32 IST
   

ಬೆಳಗಾವಿ: ಹಡಪದ ಸಮಾಜಕ್ಕೆ ಹಿಂದುಳಿದ ವರ್ಗ 2ಎರಲ್ಲಿ ಒಳಮೀಸಲಾತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಸಮಾಜದವರು ಮಂಗಳವಾರ ಸುವರ್ಣ ವಿಧಾನಸೌಧ ಬಳಿ ಪ್ರತಿಭಟನೆ ನಡೆಸಿದರು.

‘ನಾಯಿಂದ ಕ್ಷೌರಿಕ, ಹಡಪದ, ನಾವಲಿಗ, ನಾಯಿದ, ಕೆಲಸಿಗ, ಕೆಲಸಿ, ಮಹಲೇ, ಬಂಡಾರಿ, ಕಾಯಕದ, ನಾಪಿತ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುವ ನಾವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದೇವೆ. ಜಾತಿ ಕಾಲಂನಲ್ಲಿ ನಮ್ಮ ಪೂರ್ವಿಕರಿಗೆ ಮೇಲ್ಜಾತಿಯವರು ತಪ್ಪು ತಿಳಿವಳಿಕೆ ನೀಡಿ ಹಿಂದೂ ಲಿಂಗಾಯತ, ಹಿಂದೂ ವೀರಶೈವ ಎಂದು ನಮೂದಿಸಿದ್ದಾರೆ. ಆದರೆ, ಯಾವ ಲಿಂಗಾಯತರು ಹಾಗೂ ವೀರಶೈವರು ನಮ್ಮೊಂದಿಗೆ ವಿವಾಹ ಸಂಬಂಧಗಳನ್ನು ಮಾಡುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಹಿಂದೂ ಹಡಪದ, ಹಿಂದೂ ಕ್ಷೌರಿಕ ಎಂದು ಪ್ರಮಾಣಪತ್ರ ನೀಡುವಂತೆ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು’ ಎಂದು ಆಗ್ರಹಿಸಿದರು.

‘ಹಡಪದ (ಕ್ಷೌರಿಕ) ಸಮಾಜಕ್ಕೆ ₹ 100 ಕೋಟಿ ಅನುದಾನದೊಂದಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಎನ್. ಶಂಕರಪ್ಪ ಹಾಗೂ ಹಾಲಿ ಅಧ್ಯಕ್ಷ ಕಾಂತರಾಜು ವರದಿಯನ್ನು ಸರ್ಕಾರ ಶೀಘ್ರವೇ ಜಾರಿಗೊಳಿಸಬೇಕು. ಹಡಪದ ಅಪ್ಪಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿಹಾಳ ಗ್ರಾಮವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು. ನಿಷೇಧಿತ ಪದ ಬಳಸುವವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಲು ಅವಕಾಶ ಕೊಡಬೇಕು. ತಂಗಡಗಿಯಲ್ಲಿರುವ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.‌

ADVERTISEMENT

‘ಕ್ಷೌರಿಕರನ್ನು ಅಸಂಘಟಿತ ಕಾರ್ಮಿಕರು ಎಂದು ಘೋಷಿಸಲಾಗಿದೆಯಾದರೂ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರ ಇತ್ತ ಗಮನಹರಿಸಬೇಕು. ಸೌಲಭ್ಯಗಳು ದೊರೆಯುವಂತೆ ಮಾಡಬೇಕು. ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು’ ಎಂದು ಆಗ್ರಹಿಸಿದರು.

ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ಸಂಘದ ಅಧ್ಯಕ್ಷ ಅಣ್ಣಾರಾವ್ ನರಬೋಳೆ, ಯುವ ಘಟಕದ ಅಧ್ಯಕ್ಷ ನಾಗರಾಜ ಸರ್ಜಾ‍ಪೂರ ನೇತೃತ್ವ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.