
ಬೆಳಗಾವಿ: ‘ಬಿ.ಆರ್.ಅಂಬೇಡ್ಕರ್ ಅವರ ಒಳನೋಟಗಳು, ನೈತಿಕ ತತ್ವಗಳು ಮತ್ತು ದೃಷ್ಟಿಕೋನ ದೇಶದ ಸಾರ್ವಜನಿಕ ಜೀವನ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. ಸ್ಪಷ್ಟ ಚಿಂತನೆ ಮೂಲಕ ಅವರು ಶಿಕ್ಷಣ ಮುನ್ನೆಲೆಗೆ ತಂದು, ಸಾಮಾಜಿಕ ಪಿಡುಗಾದ ಜಾತಿ ತಾರತಮ್ಯ ಹೋಗಲಾಡಿಸಲು ಶ್ರಮಿಸಿದರು’ ಎಂದು ಚಿಂತಕ ಪ್ರೊ.ರಾಜೀವ್ ಭಾರ್ಗವ ಅಭಿಪ್ರಾಯಪಟ್ಟರು.
ಇಲ್ಲಿನ ಬಿ.ಎಸ್.ಜೀರಗೆ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜಕಾರ್ಯ ವಿಭಾಗ, ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಡಾ.ಬಿ.ಆರ್.ಅಂಬೇಡ್ಕರ್’ ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
‘ಅಂಬೇಡ್ಕರ್ ಎಂದಿಗೂ ಪ್ರತೀಕಾರ ತೀರಿಸಿಕೊಳ್ಳಲಿಲ್ಲ. ಬದಲಿಗೆ ನ್ಯಾಯದ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜಾತಿ ವ್ಯವಸ್ಥೆಯಲ್ಲಿ ತಾರತಮ್ಯ ಆಕಸ್ಮಿಕವಲ್ಲ. ಅದು ಒಂದು ನಿರ್ಮಿತ ವ್ಯವಸ್ಥೆ. ಈ ವ್ಯವಸ್ಥೆ ಹೋಗಲಾಡಿಸಲು ಮತ್ತು ಸಮಾಜದ ಸುಸ್ಥಿರ ಯೋಗಕ್ಷೇಮ ಕಾಪಾಡಲು ನೈತಿಕ ತತ್ವಗಳೊಂದಿಗೆ ಬೆಸೆದ ರೂಢಿಗಳು ಅಗತ್ಯ ಎಂಬ ತತ್ವ ನಂಬಿದ್ದರು’ ಎಂದು ಸ್ಮರಿಸಿದರು.
ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಸಾಬಿರ್‌ಅಹ್ಮದ್ ಮುಲ್ಲಾ, ‘ಉತ್ತರ ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಉಪಯುಕ್ತವಾದ ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಕೇಂದ್ರವೂ ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ‘ಈಗ ವಿದ್ಯಾರ್ಥಿಗಳು ವೃತ್ತಿಕೌಶಲ ಅಭಿವೃದ್ಧಿಪಡಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುವುದು ಅನಿವಾರ್ಯವಾಗಿದೆ. ಅಂಕ ಗಳಿಕೆಗಿಂತ, ತತ್ವ ಮತ್ತು ಜ್ಞಾನಕ್ಕೆ ಶರಣಾಗಬೇಕು. ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸುವಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು ನೆರವಾಗಲಿವೆ’ ಎಂದು ಹೇಳಿದರು.
ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್.ಪಾಟೀಲ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ, ಜೆ.ಸೋಮಶೇಖರ ಉಪಸ್ಥಿತರಿದ್ದರು. ಗಜಾನನ ನಾಯ್ಕ ನಿರೂಪಿಸಿದರು. ಅಶ್ವಿನಿ ಜಾಮೂನಿ ವಂದಿಸಿದರು.
ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ದೇಶದ ವಿವಿಧ ಕಡೆಗಳಿಂದ ಬಂದಿದ್ದ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.