ADVERTISEMENT

ಭೂಸ್ವಾಧೀನಕ್ಕೆ ₹105.70 ಕೋಟಿ ಮೀಸಲು

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ 2024–25ನೇ ಸಾಲಿನ ಬಜೆಟ್‌ ಮಂಡಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 16:01 IST
Last Updated 1 ಮಾರ್ಚ್ 2024, 16:01 IST
<div class="paragraphs"><p>ಬೆಳಗಾವಿಯಲ್ಲಿ ಬುಧವಾರ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಬುಜಾ ಬಜೆಟ್‌&nbsp;ಮಂಡಿಸಲಾಯಿತು</p><p></p></div>

ಬೆಳಗಾವಿಯಲ್ಲಿ ಬುಧವಾರ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಬುಜಾ ಬಜೆಟ್‌ ಮಂಡಿಸಲಾಯಿತು

   

ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ಪ್ರಸಕ್ತ (2024–25) ಬಜೆಟ್‌ನಲ್ಲಿ, ವಿವಿಧ ವಸತಿ ಯೋಜನೆಗಳಿಗಾಗಿ ಭೂಸ್ವಾಧೀನ ಮಾಡಿಕೊಳ್ಳಲು ₹105.70 ಕೋಟಿ ಮೀಸಲು ಇಡಲಾಗಿದೆ.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಇಲ್ಲಿನ ಬುಡಾ ಕಚೇರಿಯಲ್ಲಿ ಶುಕ್ರವಾರ ಆಯುಕ್ತ ಶಕೀಲ್ ಅಹ್ಮದ್ ಅವರು ಬಜೆಟ್‌ ಮಂಡಿಸಿದರು. ಈ ಬಾರಿ ಬಜೆಟ್‌ ಗಾತ್ರ ₹369.46 ಕೋಟಿಗೆ ಏರಿದೆ. ವಿವಿಧ ಮೂಲಗಳಿಂದ ₹255.50 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅಲ್ಲದೇ, ₹1ಕೋಟಿ ಉಳಿತಾಯ ಬಜೆಟ್‌ ಮಂಡಿಸಲಾಗಿದೆ.

ಪ್ರಾಧಿಕಾರದ ವ್ಯಾಪ್ತಿಗೆ ಬರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ನಿವೇಶನ ಸಿದ್ಧತೆ, ಕ್ರೀಡಾಕೂಟಕ್ಕೆ ಅನುಕೂಳವಾಗುವಂಥ ಮೈದಾನ, ನಗರದ ಸೌಂದರ್ಯಕ್ಕಾಗಿ ಉದ್ಯಾನಗಳ ಅಭಿವೃದ್ಧಿ, ಮುದ್ರಣ, ವಸತಿ ಸಮುಚ್ಛಯ ನರ್ವಹಣೆ ಸೇರಿದಂತೆ ವಿವಿಧ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ.

ಹೊಸದಾಗಿ ನಿರ್ಮಾಣವಾದ ಸ್ವಾತಂತ್ರೃ ಯೋಧರ ಕಾಲನಿ, ಸಹ್ಯಾದ್ರಿ ನಗರ, ಎಚ್.ಡಿ.ಕುಮಾರಸ್ವಾಮಿ ಬಡಾವಣೆ, ರಾಮತೀರ್ಥ ನಗರ, ಕುವೆಂಪುರ ನಗರ ಸೇರಿದಂತೆ ನಗರ ಹೊರವಲಯದ ಪ್ರದೇಶಗಳಿಂದ ನಿಯಮಿತವಾಗಿ ಮನೆ ಕರ ಸಂಗ್ರಹಿಸುವ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.

ಮನೆ ತೆರಿಗೆ, ಆರೋಗ್ಯ ಕರ, ಗ್ರಂಥಾಲಯ ಕರ, ಉದ್ಯಮ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ದಂಡ, ಉಪ ವಿಭಜನೆ ಶುಲ್ಕ, ನವೀಕರಣ ಶುಲ್ಕ, ನಿವೇಶನಗಳ ಹರಾಜು, ಖಾಸಗಿ ರೂಪುರೇಖೆಯಿಂದ ಅಭಿವೃದ್ಧಿ ಹಾಗೂ ಅರ್ಜಿಗಳ ಮಾರಾಟ, ಟೆಂಡರ್ ಫಾರ್ಮಗಳ ಮಾರಾಟ, ಸಮುದಾಯ ಭವನ ಕಟ್ಟಡಗಳ ಬಾಡಿಗೆ, ವಿಳಂಬ ಖಾತೆಯಿಂದ ಬಡ್ಡಿ ಸಂಗ್ರಹ ಸೇರಿದಂತೆ ಒಟ್ಟು ₹255.50 ಕೋಟಿ ಆದಾಯ ನಿರೀಕ್ಷೆ ಮಾಡಲಾ‌ಗಿದೆ. ಅಲ್ಲದೇ, ಬಡಾವಣೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 75 ಕೋಟಿ ಅನುದಾನ ಮೀಸಲು ಇಡಲಾಗಿದೆ.

ಟಿಳಕವಾಡಿ 2ನೇ ರೈಲ್ವೆ ಗೇಟ್, ರಾಣಿ ಚನ್ನಮ್ಮ ನಗರ 6 ಮತ್ತು 2ನೇ ಹಂತ, ದೂರದರ್ಶನ ನಗರ, ಅನಗೋಳ ಯೋಜನೆ, ಶಾಂತಿ ನಗರ ಯೋಜನೆ, ರಾಮತೀರ್ಥ ನಗರ, ಕುವೆಂಪು ನಗರ, ಬೆನಕನಹಳ್ಳಿ ಯೋಜನೆ, ಸಹ್ಯಾದ್ರಿ ನಗರ, ಮಹಾದ್ವಾರ ರಸ್ತೆ, ಎಚ್.ಡಿ.ಕುಮಾರಸ್ವಾಮಿ ಬಡಾವಣೆ ಯೋಜನೆಗಳಿಗೂ ಆದ್ಯತೆ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಅಭಯ ಪಾಟೀಲ, ಆಸಿಫ್ ಸೇಠ್, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಪಾಲಿಕೆ ಆಯುಕ್ತ ಪಿ.ಎನ್.ಲೋಕೇಶ ಹಾಗೂ ಬುಡಾ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.