ಸವದತ್ತಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯ ಶತಮಾನೋತ್ಸವ ಹಾಗೂ ವಿಜಯದಶಮಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಭಾನುವಾರ ಜರುಗಿದ ಗಣವೇಶಧಾರಿಗಳ ಆಕರ್ಷಕ ಪಥಸಂಚಲನಕ್ಕೆ ಸ್ಥಳೀಯರು ಜೆಸಿಬಿ ಮೂಲಕ ಹೂಮಳೆ ಸುರಿಸಿ ಸಂಭ್ರಮಿಸಿದರು.
ಎಪಿಎಂಸಿ ಆವರಣದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ನಂತರ ಆರ್‌ಎಸ್‌ಎಸ್ ಪ್ರಮುಖ ನರಸಿಂಹ ಕುಲಕರ್ಣಿ ನೇತೃತ್ವದಲ್ಲಿ ಆರಂಭವಾದ ವಿಜಯದಶಮಿ ಪಥ ಸಂಚಲನ ಹೊಸಪೇಟಿ ಓಣಿ, ಕಟಕೋಳ ಬ್ಯಾಂಕ ವೃತ್ತ, ಆನಿ ಅಗಸಿ, ಬಜಾರ ಮಾರ್ಗವಾಗಿ ಎಸ್‌ಎಲ್‌ಎಒ ಕ್ರಾಸ್ ಮೂಲಕ ತಾಲ್ಲೂಕು ಕ್ರೀಡಾಂಗಣ ತಲುಪಿತು.
ಸ್ಥಳೀಯ ಮತ್ತು ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ ಸುಮಾರು ಐದನೂರಕ್ಕೂ ಅಧಿಕ ಗಣವೇಶಧಾರಿಗಳ ಪಥ ಸಂಚಲನ ನೋಡುಗರನ್ನು ಸೆಳೆಯಿತು. ಪುಟಾಣಿ ಮಕ್ಕಳು ಜೈ ಶ್ರೀರಾಮ, ಸಂಘ ಶತಾಬ್ದಿ ಘೋಷವಾಕ್ಯಗಳ ಮೂಲಕ ಮೆರಗು ಹೆಚ್ಚಿಸಿದರು.
ನಗರದ ಬೀದಿಗಳಲ್ಲಿ ಕೇಸರಿ ಧ್ವಜ, ಕೇಸರಿ ತೋರಣಗಳು ಹಾಗೂ ಸಂಸ್ಥಾಪಕರ ಭಾವಚಿತ್ರ, ಭಾರತ ಮಾತೆ, ಭಗತ್‌ಸಿಂಗ್, ಛತ್ರಪತಿ ಶಿವಾಜಿ, ಬಸವೇಶ್ವರ ಹಾಗೂ ಮಹಾತ್ಮರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.
ಹೊಸಪೇಟಿ ಓಣಿ ಸೇರಿ ವಿವಿಧೆಡೆ ಯುವಕರು, ಮಹಿಳೆಯರು ರಸ್ತೆಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಗಣಾಧಾರಿಗಳಿಗೆ ರಸ್ತೆ ಉದ್ದಕ್ಕೂ ಪುಷ್ಪವೃಷ್ಟಿ ಸುರಿಸಿದರು. ತೆರೆದ ವಾಹನದಲ್ಲಿ ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಹಾಗೂ ಮಾಧವರಾವ್ ಸದಾಶಿವರಾವ್ ಗೋಲವಾಲ್ಕರ್ ಅವರ ಭಾವಚಿತ್ರವಿರಿಸಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ತಾಲ್ಲೂಕು ಕ್ರೀಡಾಂಗಣದಲ್ಲಿ ಸಂಜೆ ಸಭೆ ಜರುಗಿತು. ಸ್ಥಳೀಯ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿರುಪಾಕ್ಷ ಮಾಮನಿ ಗಣವೇಶಧಾರಿಯಾಗಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ಯುವಕರಲ್ಲಿ ಉತ್ಸಾಹ ಹೆಚ್ಚಿಸಿತು. ಉಮೇಶ ಶಿಗ್ಲಿ, ಜಿ.ವಾಯ್. ಕರಮಲ್ಲನವರ, ಶಿವಾನಂದ ಸರದಾರ, ಶಂಕರ ವಣ್ಣೂರ, ಹೇಮಂತ ಭಸ್ಮೆ, ಈಶ್ವರ ಮೇಲಗಿರಿ ಹಾಗೂ ಪ್ರಮುಖರು ಇದ್ದರು.
ಪಥಸಂಚಲನದಲ್ಲಿ ಕೆಎಸ್‌ಆರ್‌ಪಿ, ಡಿಆರ್, ಸಿವಿಲ್ ಸೇರಿ ಒಟ್ಟು 130 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಭದ್ರತೆಗಾಗಿ ನೀಯೋಜಿಸಲಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯ ಶತಮಾನೋತ್ಸವ ಹಾಗೂ ವಿಜಯದಶಮಿ ನಿಮಿತ್ಯ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.