
ಮೂಡಲಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು 100 ವರ್ಷಗಳ ಪೂರೈಸಿದ ನಿಮಿತ್ತವಾಗಿ ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ಭಾನುವಾರ ಜರುಗಿದ ಪಥಸಂಚಲನವು ಎಲ್ಲರ ಗಮನಸೆಳೆಯಿತು.
280ಕ್ಕೂ ಅಧಿಕ ಸಂಖ್ಯೆಯಲ್ಲಿ ಗಣವೇಷಧಾರಿಗಳು ಪಾಲ್ಗೊಂಡಿದ್ದರು. ಬಸವೇಶ್ವರ ವೃತ್ತದ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡ ಪಥಸಂಚಲನವು ಘಟ್ಟಗಿ ಬಸವೇಶ್ವರ ದೇವಸ್ಥಾನ, ರಾಘವೇಂದ್ರ ದೇವಸ್ಥಾನ, ಚೌಕಿ ಮಠ, ಪೇಟೆ ಹನುಮಾನ ಮಂದರ, ಶಿವಾಜಿ ವೃತ್ತ, ಬಸವ ಪಟ್ಟಣ, ಹನುಮಾನ ಮಂದಿರ ಮೂಲಕ ಕೊಪದಟ್ಟಿ ಮಾರ್ಗವಾಗಿ ಸಾಗಿ ಬಸವೇಶ್ವರ ದೇವಸ್ಥಾನ ಬಳಿ ಸಮಾವೇಶಗೊಂಡಿತು.
ಪಥಸಂಚಲನದ ಮಾರ್ಗದುದ್ದಕ್ಕೂ ಮಹಿಳೆಯರು ರಂಗೋಲಿ ಚಿತ್ತಾರ ಬಿಡಿಸಿ ಅಲಂಕಾರಗೊಳಿಸಿದ್ದರು. ದಾರಿ ಎರಡೂ ಬದಿಯಲ್ಲಿ ನಿಂತ ಯುವಕರು ಗಣವೇಷಧಾರಿಗಳ ಮೇಲೆ ಪುಷ್ಪ ವೃಷ್ಟಿ ಮಾಡಿ ಶುಭ ಹಾರೈಸಿದರು.
ಸಮಾರಂಭವದ ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕದ ವಕ್ತಾರ ಸುಕೃಷ್ಣಮೂರ್ತಿ ಮಾತನಾಡಿ ‘ಭಾರತ ದೇಶದ ಮೂಲ ವಾರುಸುದಾರರು ಹಿಂದೂಗಳಾಗಿದ್ದಾರೆ’ ಎಂದರು.
ಬ್ರಿಟಿಷರ ದುರಾಡಳಿತದಿಂದ ದೇಶ ರಕ್ಷಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ರಚನೆ ಮಾಡಲಾಗಿದೆ. ಹಿಂದೂ ಸಂಸ್ಕೃತಿ, ಹಿಂದೂ ಒಗ್ಗಟ್ಟು ಮತ್ತು ರಾಷ್ಟ್ರ ಸ್ವಾವಲಂಬನೆ ಸಾಧಿಸುವುದು ಸಂಘದ ಉದ್ದೇಶ ಎಂದರು.
ದೇಶದ ಹಿಂದೂಗಳನ್ನು ಜಾಗೃತ ಮಾಡುವುದು, ದೇಶದಲ್ಲಿ ಯುದ್ದ, ಜಲ ಪ್ರಳಯ ಯಾವುದೇ ವಿಷಮ ಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸಿ ನೆರವು ನೀಡುವುದು, ಮತ್ತು ಭಾರತವನ್ನು ವಿಶ್ವಗುರುವನ್ನಾಗಿಸುವುದು ಸಂಘದ ಮುಖ್ಯ ಗುರಿಯಾಗಿದೆ ಎಂದರು.
ಸಮಾರಂಭದ ಸಾನ್ನಿಧ್ಯವನ್ನು ಯಾದವಾಡದ ಚೌಕಿಮಠದ ಅಭಿನವ ಚೌಕೇಶ್ವರ ಮಹಾಶಿವಯೋಗಿ ಹಾಗೂ ಮಾಳಿಂಗೇಶ್ವರ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ಸೈನಿಕ ಫಕೀರಪ್ಪ ಭೀಮಪ್ಪ ಭಜಂತ್ರಿ ಭಾಗವಹಿಸಿದ್ದರು.
ರವಿ ಸುಣಗಾರ ಸ್ವಾಗತಿಸಿದರು, ರಾಜು ಬಳಗಾರ ಗೀತೆ ಹೇಳಿದರು, ಮಾಳು ದಾಸರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.