ADVERTISEMENT

ಬೆಳಗಾವಿ | ಆರ್‌ಟಿಇ; ಶೇ 50ಕ್ಕಿಂತಲೂ ಕಡಿಮೆ ಅರ್ಜಿ ಸಲ್ಲಿಕೆ!

ಆಕರ್ಷಣೆ ಕಳೆದುಕೊಂಡ ಆರ್‌ಟಿಇ ಸೀಟು

ಶ್ರೀಕಾಂತ ಕಲ್ಲಮ್ಮನವರ
Published 27 ಜುಲೈ 2020, 13:15 IST
Last Updated 27 ಜುಲೈ 2020, 13:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಶಿಕ್ಷಣ ಹಕ್ಕು ಕಾಯ್ದೆಗೆ (ಆರ್‌ಟಿಇ) ತಿದ್ದುಪಡಿ ತಂದ ನಂತರ ಜಿಲ್ಲೆಯಲ್ಲಿರುವ ‌ಅನುದಾನಿತ ಹಾಗೂ ಅನುದಾನ ರಹಿತ (ಖಾಸಗಿ) ಶಾಲೆಗಳಲ್ಲಿರುವ ಸೀಟುಗಳ ಬೇಡಿಕೆ ತೀವ್ರ ಕುಸಿತ ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲಿ ಶೇ 50ಕ್ಕಿಂತಲೂ ಕಡಿಮೆ ಬೇಡಿಕೆ ಕಂಡುಬಂದಿದೆ. ಒಟ್ಟು 1966 ಸೀಟುಗಳ ಪೈಕಿ ಕೇವಲ 883 ಸೀಟುಗಳಿಗೆ ಮಾತ್ರ ಅರ್ಜಿ ಸಲ್ಲಿಕೆಯಾಗಿರುವುದೇ ಇದಕ್ಕೆ ಸಾಕ್ಷಿ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 40 ಅನುದಾನಿತ ಹಾಗೂ 5 ಅನುದಾನ ರಹಿತ ಶಾಲೆಗಳು ಆರ್‌ಟಿಇ ವ್ಯಾಪ್ತಿ ಅಡಿ ಬರುತ್ತವೆ. ಇದೇ ರೀತಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 164 ಶಾಲೆಗಳು ಅನುದಾನಿತಗಳಿದ್ದು, ಅನುದಾನ ರಹಿತ ಶಾಲೆಗಳಿಲ್ಲ. ಒಟ್ಟು 209 ಶಾಲೆಗಳಲ್ಲಿ 1966 ಸೀಟುಗಳು ಲಭ್ಯ ಇವೆ. ಆದರೆ, ಇವುಗಳಿಗೆ ತಕ್ಕದಾಗಿ ಬೇಡಿಕೆ ಬಂದಿಲ್ಲ. ಕೌನ್ಸಿಲಿಂಗ್‌ ಸುತ್ತಿನ ನಂತರ ಇವುಗಳಲ್ಲಿಯೂ ಬಹಳಷ್ಟು ಸೀಟುಗಳು ಭರ್ತಿಯಾಗದೇ ಹೋಗುವ ಸಾಧ್ಯತೆ ಇದೆ.

ಏನಿದು ಆರ್‌ಟಿಐ: ಖಾಸಗಿ ಶಾಲೆಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ 2010ರಲ್ಲಿ ಕೇಂದ್ರದ ಯುಪಿಎ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ಜಾರಿಗೊಳಿಸಿತ್ತು. 2018ರಲ್ಲಿ ಅನುದಾನಿತ ಶಾಲೆಗಳನ್ನೂ ಇದರಲ್ಲಿ ಸೇರಿಸಲಾಗಿತ್ತು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಆಡಳಿತ ಮಂಡಳಿಗಳು ನಡೆಸುವ ಶಾಲೆಗಳನ್ನು ಈ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು.

ADVERTISEMENT

ಶಾಲೆಯ ಆರಂಭಿಕ ತರಗತಿಗೆ (ಎಲ್‌ಕೆಜಿ ಅಥವಾ 1ನೇ ತರಗತಿ) ಮಾತ್ರ ಪ್ರವೇಶ ನೀಡಲಾಗುತ್ತದೆ. ಶೇ 25ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ. ಇದರಡಿ ಆಯ್ಕೆಯಾಗುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಶಿಕ್ಷಣ ಸಂಸ್ಥೆಗಳಿಗೆ ಭರಿಸುತ್ತದೆ.

ನಿಯಮ ಬದಲು:ಕಳೆದ ವರ್ಷ 2019ರಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರವು ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ಮಾಡಿತು. ಇದರ ಪ್ರಕಾರ, ವಿದ್ಯಾರ್ಥಿ ವಾಸಿಸುವ ವಾರ್ಡ್‌ ಅಥವಾ ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿಲ್ಲದಿದ್ದರೆ ಮಾತ್ರ ಖಾಸಗಿ ಅಥವಾ ಅನುದಾನಿತ ಶಾಲೆಗಳಲ್ಲಿ ಸೀಟು ನೀಡಲು ನಿರ್ಣಯ ಕೈಗೊಂಡಿತು.

ಜಿಲ್ಲೆಯಾದ್ಯಂತ ಬಹುತೇಕ ಕಡೆ ಸರ್ಕಾರಿ ಶಾಲೆಗಳು ಇವೆ. ಇವು ಇಲ್ಲದ ಪ್ರದೇಶಗಳಲ್ಲಿರುವ ಹಾಗೂ ಆರ್‌ಟಿಇ ವ್ಯಾಪ್ತಿಯಡಿ ಬರುವ ಖಾಸಗಿ ಅಥವಾ ಅನುದಾನಿತ ಶಾಲೆಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಹೀಗಾಗಿ ಸಹಜವಾಗಿ ಸೀಟುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ನಿಯಮ ಬದಲಾಗುವ ಮೊದಲು ಜಿಲ್ಲೆಯಲ್ಲಿ ಅಂದಾಜು 9,000ಕ್ಕೂ ಹೆಚ್ಚು ಸೀಟುಗಳು ಲಭ್ಯವಿದ್ದವು.

ಆನ್‌ಲೈನ್‌ ಮೂಲಕ ಹಂಚಿಕೆ:ಶಿಕ್ಷಣ ಇಲಾಖೆಯು ಸದ್ಯದಲ್ಲಿಯೇ ಆನ್‌ಲೈನ್‌ ಕೌನ್ಸಿಲಿಂಗ್‌ ಮೂಲಕ ಸೀಟುಗಳನ್ನು ಹಂಚಿಕೆ ಮಾಡಲಿದೆ. ಮೂರು ಸುತ್ತುಗಳ ಕೌನ್ಸಿಲಿಂಗ್‌ ನಂತರವೂ ನೂರಾರು ಸೀಟುಗಳು ಖಾಲಿ ಉಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.