ADVERTISEMENT

ಬಡತನದಲ್ಲೂ ಅರಳಿದ ಐಶ್ವರ್ಯಾ: 607 ಅಂಕ ಗಳಿಸಿದ ಕರಗುಪ್ಪಿಯ ಕೃಷಿಕನ ಪುತ್ರಿ

ಎಂ.ಮಹೇಶ
Published 10 ಆಗಸ್ಟ್ 2020, 20:15 IST
Last Updated 10 ಆಗಸ್ಟ್ 2020, 20:15 IST
ಐಶ್ವರ್ಯಾ ಪಾಟೀಲ
ಐಶ್ವರ್ಯಾ ಪಾಟೀಲ   

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಸಣ್ಣ ಕೃಷಿಕರಾದ ಅಶೋಕ–ಮಹಾದೇವಿ ದಂಪತಿಯ ಪುತ್ರಿ ಐಶ್ವರ್ಯಾ ಪಾಟೀಲ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 607 ಅಂಕ ಗಳಿಸಿ, ಬಡತನದ ನಡುವೆಯೂ ಸಾಧನೆ ತೋರಿ ಗಮನಸೆಳೆದಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾದ ಅವರು ಕನ್ನಡದಲ್ಲಿ 125ಕ್ಕೆ 124, ವಿಜ್ಞಾನ–86, ಇಂಗ್ಲಿಷ್‌– 99, ಗಣಿತ–99, ಹಿಂದಿ–100ಕ್ಕೆ 100, ಸಮಾಜವಿಜ್ಞಾನದಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ.

‘ಅಶೋಕ ಅವರಿಗೆ ಒಂದು ಎಕರೆ ಜಮೀನಿದೆ. ಅದರಲ್ಲಿ ಕೃಷಿ ಮಾಡುತ್ತಾರೆ. ಜೀವನ ನಿರ್ವಹಣೆಗೆಗಾಗಿ ಇತರರ ಜಮೀನುಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರ ಪತ್ನಿಯೂ ಇದೇ ಕಾಯಕ ಮಾಡುತ್ತಾರೆ. ಸಣ್ಣ ಹಳ್ಳಿಯ ಪ್ರತಿಭೆ ಐಶ್ವರ್ಯಾ ತಂದೆ–ತಾಯಿಯ ಕಷ್ಟ ಅರ್ಥ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ಮುಂದೆ ಬರುತ್ತಾ ಮೆಚ್ಚುಗೆ ಗಳಿಸಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥರು ಹಾಗೂ ಶಿಕ್ಷಕರು. ಐಶ್ವರ್ಯಾ ವಸತಿ ಶಾಲೆ ಪ್ರವೇಶಕ್ಕೆ ನಡೆದ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಿದ್ದರು.

ADVERTISEMENT

‘ಅಪ್ಪ–ಅಮ್ಮನ ಸಹಕಾರ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಒಳ್ಳೆಯ ಅಂಕಗಳನ್ನು ಪಡೆಯುವುದು ಸಾಧ್ಯವಾಯಿತು. ಬೆಳಿಗ್ಗೆ ಹಾಗೂ ಸಂಜೆ ಹೊತ್ತಲ್ಲಿ ಹೆಚ್ಚು ಓದುತ್ತಿದ್ದೆ. ಶಾಲೆಯಲ್ಲಿ ಶಿಕ್ಷಕರು ಚೆನ್ನಾಗಿ ಹೇಳಿಕೊಡುತ್ತಿದ್ದರು. ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಊರಿಗೆ ಬರಬೇಕಾಯಿತು. ಪರೀಕ್ಷೆ ರದ್ದಾಗುವುದಿಲ್ಲ ಎನ್ನುವ ಬಗ್ಗೆ ಸ್ಪಷ್ಟತೆ ಇತ್ತು. ಹೀಗಾಗಿ, ಓದಿನಲ್ಲಿ ನಿಷ್ಕಾಳಜಿ ತೋರಲಿಲ್ಲ. ಶಾಲೆಯಲ್ಲಿದ್ದಾಗಲೇ ಅಂದರೆ ಏಪ್ರಿಲ್‌ನಲ್ಲೇ ಪರೀಕ್ಷೆ ನಡೆದಿದ್ದರೆ ಇನ್ನೂ ಹೆಚ್ಚಿನ ಅಂಕ ಪಡೆಯುತ್ತಿದ್ದೆ. ಲಾಕ್‌ಡೌನ್‌ನಿಂದ ಸಮಯ ಸಿಕ್ಕಿತಾದರೂ, ಮನೆಯಲ್ಲಿ ಶಾಲೆಯಂತಹ ವಾತಾವರಣ ಇರುವುದಿಲ್ಲ ಅಲ್ಲವೇ?’ ಎಂದು ಐಶ್ವರ್ಯಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಪ್ಪ–ಅಮ್ಮ ಕೃಷಿ ಮಾಡಿ ಕೂಲಿಗೆ ಹೋಗಿ ನಮ್ಮನ್ನು ಸಾಕುತ್ತಿದ್ದಾರೆ. ಅವರಿಗೆ ಒಳ್ಳೆಯ ಹೆಸರು ತರಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿ ಮುಂದೆಯೂ ಚೆನ್ನಾಗಿ ಓದುತ್ತೇನೆ. ಪಿಯುಸಿಯಲ್ಲಿ ವಿಜ್ಞಾನ ವಿಷಯಕ್ಕೆ ಸೇರಬೇಕು. ಹೆಚ್ಚಿನ ಅಂಕ ಗಳಿಸಿ ನೀಟ್ ಪರೀಕ್ಷೆ ಪಾಸಾಗಿ ವೈದ್ಯಕೀಯ ಕೋರ್ಸ್‌ ಮಾಡಬೇಕು ಎಂದುಕೊಂಡಿದ್ದೇನೆ. ಅಷ್ಟೊಂದು ಆರ್ಥಿಕ ಚೈತನ್ಯ ನಮಗಿಲ್ಲ. ಆದರೆ, ಗುರಿ ತಲುಪಲು ಓದುತ್ತೇನೆ’ ಎನ್ನುತ್ತಾರೆ ಅವರು.

‘ಮಗಳು ಹೆಚ್ಚಿನ ಅಂಕ ಪಡೆದಿರುವುದಕ್ಕೆ ಚಲೋ ಎನಿಸುತ್ತಿದೆ. ಎಲ್ಲರೂ ಆಕೆಯನ್ನು ಹೊಗಳುತ್ತಿರುವುದರಿಂದ ಹೆಮ್ಮೆ ಆಗುತ್ತದೆ. ನಮ್ಮ ಕಷ್ಟವನ್ನು ತಿಳಿದುಕೊಂಡು ಚೆನ್ನಾಗಿ ಓದುತ್ತಿದ್ದಾಳೆ. ಕೃಷಿ, ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದೇವೆ. ಮುಂದೆಯೂ ಆಕೆಯನ್ನು ಮಜಲಟ್ಟಿಯಲ್ಲೇ ಕಾಲೇಜಿಗೆ ಸೇರಿಸಬೇಕು ಎಂದುಕೊಂಡಿದ್ದೇವೆ’ ಎಂದು ತಾಯಿ ಮಹಾದೇವಿ ಹೇಳಿದರು.

ಸಂಪರ್ಕಕ್ಕೆ: 9071950671.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.