ADVERTISEMENT

ಬೆಳಗಾವಿಯಲ್ಲಿ ಸಹಕಾರ ಸಪ್ತಾಹ 19ರಂದು: ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಮಾಹಿತಿ

ಪೂರ್ವ ಸಿದ್ಧತೆ ಸಭೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 15:38 IST
Last Updated 9 ನವೆಂಬರ್ 2021, 15:38 IST
ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಬೆಳಗಾವಿಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಇದ್ದಾರೆ
ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಬೆಳಗಾವಿಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಇದ್ದಾರೆ   

ಬೆಳಗಾವಿ: ‘ಅಖಿಲ ಭಾರತ 68ನೇ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವನ್ನು ಇದೇ 19ರಂದು ಬೆಳಗಾವಿಯಲ್ಲಿ ಅದ್ಧೂರಿಯಾಗಿ ಆಯೋಜಿಸಲು ನಿರ್ಣಯಿಸಲಾಗಿದೆ’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಮಹಾಂತೇಶ ನಗರದಲ್ಲಿರುವ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಪ್ತಾಹ ಅಂಗವಾಗಿ ನ.14ರಿಂದ 21ರವರೆಗ ಪ್ರತಿ ದಿನ ಸಹಕಾರಿ ರಂಗದ ಅಭಿವೃದ್ಧಿಗಾಗಿ ಉಪಯುಕ್ತ ವಿಷಯಗಳ ಬಗ್ಗೆ ಪರಿಣತರಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು. 19ರಂದು ಧರ್ಮನಾಥ ಭವನದಲ್ಲಿ ನಡೆಯುವ ಸಮಾರಂಭಕ್ಕೆ ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು. ‘ನಂದಿನಿ’ ಬ್ರ್ಯಾಂಡ್‌ನ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಕ್ಷೀರ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಅವರ ಜನ್ಮ ಶತಮಾನೋತ್ಸವ ವರ್ಷವೂ ಇದಾಗಿರುವುದರಿಂದಾಗಿ ಅವರ ಸವಿನೆನಪಿಗಾಗಿ ಕಂಚಿನ ಪ್ರತಿಮೆಯನ್ನು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು. ಕ್ಷೀರಾಭಿಷೇಕ ನೆರವೇರಿಸಲು ತೀರ್ಮಾನಿಸಲಾಗಿದೆ. ಕೆಎಂಎಫ್‌ನಿಂದ ಕುರಿಯನ್ ಅವರ ಜೀವನ ಚರಿತ್ರೆಯನ್ನು ಒಳಗೊಂಡ ಹಾಗೂ ಸಹಕಾರಿ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ನಮ್ಮ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳುವ ಸಂದೇಶ ಹೊತ್ತಿರುವ ಸಂಚಿಕೆ ಬಿಡುಗಡೆಗೆ ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಸಹಕಾರ ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಮನವರಿಕೆ ಮಾಡಿಕೊಟ್ಟು, ರಂಗವನ್ನು ಸಮರ್ಥವಾಗಿ ಬಲಪಡಿಸುವ ಸಂದೇಶ ಸಾರುವುದು ಸಪ್ತಾಹದ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಕೆಎಂಎಫ್, ಬಿಡಿಸಿಸಿ ಬ್ಯಾಂಕ್, ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ, ಅರ್ಬನ್ ಬ್ಯಾಂಕ್ ಫೆಡರೇಷನ್, ಕ್ರೆಡಿಟ್ ಕೋ-ಆಪ್ ಸೊಸೈಟಿ ಫೆಡರೇಷನ್, ಪಿಕೆಪಿಎಸ್ ಮಹಾಮಂಡಳ, ಜಿಲ್ಲಾ ಸಹಕಾರಿ ಸಂಘಗಳ ಸಹಯೋಗದಲ್ಲಿ ಸಪ್ತಾಹ ನಡೆಯಲಿದ್ದು, ಯಶಸ್ವಿಗೊಳಿಸಲು ಚರ್ಚಿಸಲಾಗಿದೆ’ ಎಂದರು.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕಿ ಕೆ.ಎಂ. ಆಶಾ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಜಿ.ಎಂ. ಪಾಟೀಲ, ಉಪನಿಬಂಧಕ ಶ್ರೀನಿವಾಸ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ (ಮೆಳವಂಕಿ), ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಾಬು ಕತ್ತಿ, ಎಸ್.ಎಸ್. ಮುಗಳಿ, ಮಲ್ಲು ಪಾಟೀಲ, ಬಸವರಾಜ ಪರನ್ನವರ, ಬಾಬುರಾವ ವಾಘಮೊಡೆ, ಪ್ರಕಾಶ ಅಂಬೋಜಿ, ಉದಯಸಿಂಹ ಶಿಂಧೆ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸನ್, ಸಹಕಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.