ADVERTISEMENT

ನಂದಗಡ | ಸಂಗೊಳ್ಳಿ, ನಂದಗಡ ಪ್ರವಾಸೋದ್ಯಮ ಅಭಿವೃದ್ಧಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:33 IST
Last Updated 20 ಜನವರಿ 2026, 6:33 IST
   

ನಂದಗಡ (ಖಾನಾಪುರ ತಾ): ‘ಕ್ರಾಂತಿವೀರ ರಾಯಣ್ಣನ ಕಾರ್ಯಸ್ಥಾನಗಳಾದ ಸಂಗೊಳ್ಳಿ ಹಾಗೂ ನಂದಗಡ ಗ್ರಾಮಗಳನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಾಗಬೇಕು ಮಾಡುವುದು ನನ್ನ ಉದ್ದೇಶ. ಅದಕ್ಕೆ ಬೇಕಾದ ಕೆಲಸಗಳನ್ನು ಮಾಡಲಾಗುತ್ತಿದೆ‌. ಮುಂದೆಯೂ ಇಲ್ಲಿಗೆ ಬಂದು ವಸತಿ ಉಳಿದು ಇನ್ನಷ್ಟು ಕೆಲಸ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಐತಿಹಾಸಿಕ ನಂದಗಡದಲ್ಲಿ ಸೋಮವಾರ ರಾಯಣ್ಣನ ಜೀವನಾಧಾರಿತ ವಸ್ತು ಸಂಗ್ರಹಾಲಯ ‘ವೀರಭೂಮಿ’ ಹಾಗೂ ಕೆರೆಯ ಮಧ್ಯದಲ್ಲಿ ರಾಯಣ್ಣನ ಪ್ರತಿಮೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ರಾಯಣ್ಣನ ಕಾಲದಲ್ಲಿ ಇದ್ದಂತ ವಿಶ್ವಾಸ ದ್ರೋಹಿಗಳು ಈಗಲೂ ಇದ್ದಾರೆ. ನಾವು ಗುಲಾಮಗಿರಿ ರೂಢಿಸಿಕೊಳ್ಳಬಾರದು. ಶಿಕ್ಷಣ, ಜ್ಞಾನ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ರಾಯಣ್ಣ ಅವರ ಆದರ್ಶ, ಸ್ವಾಭಿಮಾನ ಗುಣ ದಾರಿದೀಪವಾಗಬೇಕು’ ಎಂದೂ ಕಿವಿಮಾತು ಹೇಳಿದರು.

ADVERTISEMENT

‘ರಾಯಣ್ಣನ ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. 2024ರಲ್ಲಿ ಸಂಗೊಳ್ಳಿಯಲ್ಲಿ ಶೌರ್ಯಭೂಮಿ ಹಾಗೂ ಸೈನಿಕ ಶಾಲೆಯನ್ನು ಉದ್ಘಾಟಿಸಲಾಗಿದೆ. ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಹಾಗೂ ಅವರನ್ನು ನೇಣು ಹಾಕಿದಂತಹ ನಂದಗಡ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಸಂಗೊಳ್ಳಿ ರಾಯಣ್ಣನ ಹೋರಾಟ, ಬದುಕು ಹಾಗೂ ಹಾಗೂ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ ತಿಳಿಸುವ ನಿಟ್ಟಿನಲ್ಲಿ ವೀರಭೂಮಿ ನಿರ್ಮಾಣಕ್ಕೆ 2013ರಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಇದೀಗ ಕನಸು ನನಸಾಗಿದೆ.  ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರವಾಸಿ ತಾಣವಾಗುವ ಜೊತೆಗೆ ರಾಯಣ್ಣನ ಇತಿಹಾಸ ದೇಶಕ್ಕೆ ತಿಳಿಸಿವಂತಹ ಕಾರ್ಯ ವೀರಭೂಮಿಯಲ್ಲಿ ಆಗಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ನಗರಾಭಿವೃದ್ಧಿ ಸಚಿವರಾದ ಭೈರತಿ ಎಸ್.ಸುರೇಶ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠ್ಠಲ ಹಲಗೇಕರ ಅವರು, ಕ್ಷೇತ್ರದ ಅಭಿವೃದ್ಧಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ವಿಶ್ವಾಸ್ ವೈದ್ಯ, ಗಣೇಶ ಹುಕ್ಕೇರಿ, ಆಸೀಫ್ ಸೇಠ್, ಬಾಬಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯಲ್ಲಪ್ಪ ಗುರವ, ನೇತ್ರಾ ಲೊಹಾರ್ ಹಾಗೂ ಅಧಿಕಾರಿಗಳು ವೇದಿಕೆ ಮೇಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.