ADVERTISEMENT

ಜನಪ್ರತಿನಿಧಿಗಳಿಗೆ ತಾಕತ್ತಿದ್ದರೆ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಿ: ಕರವೇ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 3:48 IST
Last Updated 28 ಆಗಸ್ಟ್ 2020, 3:48 IST
ಕನ್ನಡಪರ ಹೋರಾಟಗಾರರು
ಕನ್ನಡಪರ ಹೋರಾಟಗಾರರು   

ಬೆಳಗಾವಿ: ‘ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಸದರು ಸೇರಿದಂತೆ ಇಲ್ಲಿನ ಜನಪ್ರತಿನಿಧಿಗಳಿಗೆ ನಿಜವಾಗಿಯೂ ತಾಕತ್ತಿದ್ದರೆ ಪೀರನವಾಡಿಯಲ್ಲಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಿ’ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಸವಾಲು ಹಾಕಿದರು.

ಪೀರನವಾಡಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತ‌ನಾಡಿದರು.

‘ಗ್ರಾಮದಲ್ಲಿ ರಾಯಣ್ಣನ ಅಭಿಮಾನಿಗಳ ಬಹುದಿನಗಳ ಕನಸಿನಂತೆ ರಾತ್ರಿ ಅನಿವಾರ್ಯವಾಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದೇವೆ. ಅದನ್ನು ತೆರವುಗೊಳಿಸಲು ಹುನ್ನಾರ ನಡೆಸಿದ್ದಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಮಣಿಯುವುದಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಹೇಳಿಕೆ ಕೊಡಬೇಕು‘ಎಂದು ಒತ್ತಾಯಿಸಿದರು.

ADVERTISEMENT

ವೇದಿಕೆಯಲ್ಲಿ ಕುಳಿತು ರಾಯಣ್ಣ ನಮ್ಮವ ಎನ್ನುವುದು ಹೇಡಿತನದ ಮಾತಾಗುತ್ತದೆ. ಅದಕ್ಕೆ ನಾವು ಧಿಕ್ಕಾರ ಕೂಗಬೇಕಾಗುತ್ತದೆಎಂದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಗ ಗುಡಗನಟ್ಟಿ ಮಾತನಾಡಿ, ‘ಪ್ರತಿಮೆ ವಿವಾದ ಬೇರೆ ದಾರಿಯಲ್ಲಿ ಸಾಗುತ್ತಿತ್ತು ಹಾಗೂ ರಾಜಕೀಯ ಸೇರಿಕೊಳ್ಳುತ್ತಿತ್ತು. ಹೀಗಾಗಿ ಕರವೇ, ರಾಯಣ್ಣನ ಅಭಿಮಾನಿಗಳು, ಸ್ಥಳೀಯರು ಹಾಗೂ ಕರವೇಯವರು ಸೇರಿ ಪ್ರತಿಮೆ ಸ್ಥಾಪನೆ ಮಾಡಿದ್ದೇವೆ. ಇದರೊಂದಿಗೆ ವಿವಾದ ಬಗೆಹರಿದಿದೆ. ರಾಜ್ಯದಾದ್ಯಂತ ರಾಯಣ್ಣನ ಅಭಿಮಾನಿಗಳು ಹಾಗೂ ಕರವೇ ಕಾರ್ಯಕರ್ತರು ವಿಜಯೋತ್ಸವ ಆಚರಿಸಬೇಕು’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.