ADVERTISEMENT

ಸಂಕೇಶ್ವರ: ಬಾನಂಗಳದಲ್ಲಿ ಗಾಳಿಪಟಗಳ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:03 IST
Last Updated 17 ಜನವರಿ 2026, 5:03 IST
ಸಂಕೇಶ್ವರದಲ್ಲಿ ಶುಕ್ರವಾರ ಗಾಳಿಪಟ ಸ್ಪರ್ಧೆ ನಡೆಯಿತು 
ಸಂಕೇಶ್ವರದಲ್ಲಿ ಶುಕ್ರವಾರ ಗಾಳಿಪಟ ಸ್ಪರ್ಧೆ ನಡೆಯಿತು    

ಸಂಕೇಶ್ವರ: ಬಾನಂಗಳದಲ್ಲಿ ಬಣ್ಣಬಣ್ಣದ ಕಾಗದ ಹಕ್ಕಿಗಳ ಹಾರಾಟ, ವಿವಿಧ ಗಾತ್ರ, ಸೂತ್ರ, ವಿನ್ಯಾಸದಿಂದ ಕಣ್ಮನ ಸೆಳೆದ ಗಾಳಿಪಟಗಳ ಚಿತ್ತಾರ, ಎಲ್ಲಿ ನೋಡಿದರಲ್ಲಿ ಹಬ್ಬದ ವಾತಾವರಣ, ಮುಗಿಲು ಮುಟ್ಟಿದ ಶಾಲಾ ಮಕ್ಕಳ ಸಂಭ್ರಮದ ಹರ್ಷೋದ್ಗಾರ...  ಸಂಕೇಶ್ವರ ಪಟ್ಟಣದಲ್ಲಿ  ಪವನ ಕಣಗಲಿ ಫೌಂಡೇಷನ್ ಶುಕ್ರವಾರ ಆಯೋಜಿಸಿದ್ದ ಬೆಳಗಾವಿ ಜಿಲ್ಲಾ ಮಟ್ಟದ 'ಪತಂಗೋತ್ಸವ-2026'ದಲ್ಲಿ ಕಂಡುಬಂದ ದೃಶ್ಯಗಳಿವು.

ಇಲ್ಲಿನ ಕೊಳಲಗುತ್ತಿ ಗುಡ್ಡದ ಪರಿಸರದಲ್ಲಿ 7ನೇ  ವರ್ಷದ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು.  ಗಾಳಿಪಟ ತಯಾರಿಕೆ, ಹಾರಾಟ, ಚಿತ್ರಕಲೆ, ಲಗೋರಿ, ಚಿನ್ನಿದಾಂಡು, ಬುಗುರಿಯಾಟ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು. ನೂರಾರು ಮಕ್ಕಳು ತಮಗೆ ಬೇಕಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿಯ ಪ್ರತಿಭೆಯನ್ನು ಹೊರ ಹಾಕಿದ್ದಲ್ಲದೇ, ದೇಸಿ ಆಟಗಳನ್ನು ಆಡಿಕುಣಿದು ಕುಪ್ಪಳಿಸಿದರು.

ಆಯೋಜಕ ಪವನ ಕಣಗಲಿ ಮಾತನಾಡಿ, ದೇಸಿ ಸೊಗಡಿನ ಆಟಗಳಿಂದ ವಿಮುಖರಾಗುತ್ತಿರುವ ಇಂದಿನ ಮಕ್ಕಳನ್ನು ಮತ್ತೆ ಪ್ರಕೃತಿಯ ಮಡಿಲಿನಲ್ಲಿ ಆಟವಾಡಲು ಪ್ರೇರೇಪಿಸುವ ಸಲುವಾಗಿ ಕಳೆದ 7 ವರ್ಷಗಳಿಂದ  ಗಾಳಿಪಟ ಉತ್ಸವ ಆಯೋಜಿಸಲಾಗುತ್ತಿದೆ. ಜನರಿಂದ ವ್ಯಾಪಕ ಬೆಂಬಲ ಸಿಕ್ಕಿದೆ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಮಾತನಾಡಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳು ನಗದು ಬಹುಮಾನ, ಪ್ರಶಸ್ತಿ ಪತ್ರ, ಪಾರಿತೋಷಕಗಳನ್ನು ಪಡೆದುಕೊಂಡು ಸಂಭ್ರಮಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅತಿಥಿಗಳಿಗೆ, ಹಿತೈಷಿಗಳಿಗೆ ವಿಶೇಷ ಸತ್ಕಾರ ನೀಡಿ ಗೌರವಿಸಲಾಯಿತು.

ನಾವು ದೇಶದ ವಿವಿಧೆಡೆ ಹಲವಾರು ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದ್ದೇವೆ. ಇಲ್ಲಿನ ಉತ್ಸವವು ಹೆಚ್ಚು ಆಕರ್ಷಕವಾಗಿದೆ. ಇಲ್ಲಿ ಸೇರಿರುವ ವಿದ್ಯಾರ್ಥಿಗಳ ಉತ್ಸಾಹ, ಕಾರ್ಯಕ್ರಮ ಅಚ್ಚುಕಟ್ಟಾದ ನಿರ್ವಹಣೆ, ಉತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಗಾಳಿಪಟ ತಜ್ಞ, ರಾಷ್ಟ್ರೀಯ ಗಾಳಿಪಟ ಫೆಡರೇಷನ್‌ ಪ್ರತಿನಿಧಿ ಚಾರ್ಲ್‌ ಮ್ಯಾಥ್ಯು ಹೇಳಿದರು.

ಗಾಳಿಪಟ ತಜ್ಞರಾದ ಮುಹಮ್ಮದ್ಇದ್ರೀಸ್, ಫಾತಿಮಾಹನ್ನಾ, ಪ್ರಜೀಶಾ ಗಾಳಿಪಟ ಪ್ರದರ್ಶನ ನೀಡಿದರು. ಎ.ಸಿ.ಬಿಜಾಪುರೆ, ಸಂಗಮೇಶ ಕಂಗಳ, ಎಂ. ಬಿ. ಸನದಿ, ಎ. ಎಸ್. ಅಣ್ಣಿಗೇರಿ, ವೀರೇಶ ಮಾಸ್ತಮರಡಿ, ಸಂತೋಷ ರೋಡಗಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಸಿಪಿಐ ಶಿವಶರಣ ಅವಜಿ, ಎಸ್.ಡಿ. ನಾಯಿಕ, ಆನಂದ ಸಂಸುದ್ದಿ, ಇರ್ಶಾದ ಮುಲ್ಲಾ, ಮಾರ್ತಾಂಡ ಗೋಟೂರಿ, ವಿಜಯ ಹಂದಿಗೂಡಮಠ, ಸುಮಲತಾ ಕಣಗಲಿ, ಶಾಮಲಿಂಗ್ ಹಾಲಟ್ಟಿ, ನಸೀಮಾ ಢಾಂಗೆ ಭಾಗವಹಿಸಿದ್ದರು. 

ವಿವಿಧ ಸ್ಪರ್ಧೆಗಳ ವಿಜೇತರು:  
ಗಾಳಿಪಟ ತಯಾರಿಕೆ: ಕಾರ್ತಿಕ ಹಿರೇಮಠ (ಪ್ರಥಮ), ಶಶಾಂಕ ಎಸ್.ಕೆ. (ದ್ವಿತೀಯ), ಅಭಿಷೇಕ ಮುಡಶಿ (ತೃತೀಯ). ಗಾಳಿಪಟ ಹಾರಿಸುವುದು: ಆದಂ ಮೋಮಿನ್ದಾದಾ (ಪ್ರಥಮ), ಮಾನಸಾ ಮರಡಿ (ದ್ವಿತೀಯ), ಪ್ರೀತಂ ನಿಲಾಜ (ತೃತೀಯ). ಚಿತ್ರಕಲೆ: ವಿರಾಜ ಪಾಟೀಲ (ಪ್ರಥಮ), ಖುಷಿ ಕೂಗೆ (ದ್ವಿತೀಯ), ವರ್ಷಿತಾ ಬಾನಿ (ತೃತೀಯ). ಚಿನ್ನಿದಾಂಡು: ಸೃಜನ ಬೋಬಡೆ (ಪ್ರಥಮ), ನಿಂಗರಾಜ ಬಂಗೆನ್ನವರ (ದ್ವಿತೀಯ). ಬುಗುರಿ: ವೇದಾಂತಘಾಟಗೆ (ಪ್ರಥಮ), ಸಂಪತ್ಕೆರಿಮನಿ (ದ್ವಿತೀಯ). ಲಗೋರಿ: ಮೀನಾಕ್ಷಿ ಮತ್ತುತಂಡ (ಪ್ರಥಮ), ಯಸೀರಾ ಮತ್ತು ತಂಡ (ದ್ವಿತೀಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.