ADVERTISEMENT

ಬೆಳಗಾವಿ: ‘ಸರಸ್ ಮೇಳ’ಕ್ಕೆ ಮುಖ್ಯಮಂತ್ರಿ ಚಾಲನೆ

ಮಹಿಳಾ ಸ್ವಸಹಾಯ ಸಂಘದವರು ಸಿದ್ಧಪಡಿಸಿದ ವೈವಿಧ್ಯಮಯ ವಿನ್ಯಾಸಗಳ ಉತ್ಪನ್ನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 2:59 IST
Last Updated 13 ಡಿಸೆಂಬರ್ 2025, 2:59 IST
ಬೆಳಗಾವಿಯ ಸರ್ಕಾರಿ ಸರದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಿರುವ ಸರಸ್‌ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು
ಬೆಳಗಾವಿಯ ಸರ್ಕಾರಿ ಸರದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಿರುವ ಸರಸ್‌ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು   

ಬೆಳಗಾವಿ: ಇಲ್ಲಿನ ಸರ್ಕಾರಿ ಸರದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಆಯೋಜಿಸಿರುವ ರಾಜ್ಯಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ (ಸರಸ್ ಮೇಳ) ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ಕೊಟ್ಟರು.

ಪ್ರದರ್ಶನದಲ್ಲಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ಮಹಿಳಾ ಸ್ವಸಹಾಯ ಸಂಘದವರು ಸಿದ್ಧಪಡಿಸಿ ಪ್ರದರ್ಶಿಸಿರುವ ಉತ್ಪನ್ನಗಳನ್ನು ವೀಕ್ಷಿಸಿದರು. ‘ಮೇಳ ಯಶಸ್ವಿಯಾಗಿ ನಡೆಯಲಿ’ ಎಂದು ಆಶಿಸಿದರು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಪ್ರತಿಬಾರಿ ಇಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲೂ ಇದನ್ನು ಆಯೋಜಿಸಲಾಗುತ್ತಿದೆ’ ಎಂದರು.

ADVERTISEMENT

‘ಮಹಿಳೆಯರನ್ನು ಕೇಂದ್ರವಾಗಿ ಇರಿಸಿಕೊಂಡು ಪಂಚ ಗ್ಯಾರಂಟಿ ಯೋಜನೆಗಳುನ್ನು ಜಾರಿಗೆ ತರಲಾಗಿದೆ. ನಾವು ಮಹಿಳೆಯರಿಗೆ ನೀಡುತ್ತಿರುವ ಹಣದಿಂದ ಅವರ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ ಉತ್ತೇಜನ‌ ನೀಡಲು ‘ಅಕ್ಕ ಕ್ರೆಡಿಟ್ ಸೊಸೈಟಿ’ ಆರಂಭಿಸಲಾಗುತ್ತಿದೆ’ ಎಂದು ಹೇಳಿದರು.

ಇದೇವೇಳೆ ಜಿಲ್ಲೆಯ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಾಸಕ ಆಸಿಫ್‌ ಸೇಠ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಉಪಮೇಯರ್‌ ವಾಣಿ ಜೋಶಿ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ, ಜಿಲ್ಲಾ‌ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಎಂ.ಕಾರ್ತಿಕ, ಅಭಿಯಾನದ ನಿರ್ದೇಶಕ ಸ್ನೇಹಲ್ ಆರ್. ಇದ್ದರು.

100 ಮಳಿಗೆಗಳಲ್ಲಿ ಪ್ರದರ್ಶನ
ರಾಜ್ಯದ ವಿವಿಧ ಜಿಲ್ಲೆಗಳ ಮಹಿಳಾ ಸ್ವಸಹಾಯ ಗುಂಪಿನವರು ಸಿದ್ಧಪಡಿಸಿದ ಉತ್ಪನ್ನಗಳನ್ನು ಇಲ್ಲಿ 100 ಮಳಿಗೆಗಳಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೆ 15 ಆಹಾರ ಮಳಿಗೆಗಳಿವೆ. ಡಿ.21ರವರೆಗೆ ಪ್ರದರ್ಶನ ನಡೆಯಲಿದ್ದು ನಿತ್ಯ ಬೆಳಿಗ್ಗೆ 10.30ರಿಂದ ರಾತ್ರಿ 9.30ರವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.